CrimeKannada NewsLatestTravel

*ಭೀಕರ ರಸ್ತೆ ಅಪಘಾತಕ್ಕೆ ಏಳು ಮಂದಿ ಬಲಿ; ಹಲವರಿಗೆ ಗಾಯ*

ಪ್ರಗತಿವಾಹಿನಿ ಸುದ್ದಿ: ಜಾರ್ಖಂಡ್‌ನ ಖುಂಟಿ ಜಿಲ್ಲೆಯ ಕರ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕರ್ರಾ-ತೋರ್ಪಾ ಮುಖ್ಯ ರಸ್ತೆಯ ಜೋನೆ-ಲುದ್ರು ತಿರುವಿನ ಬಳಿ ಈ ದುರ್ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಸ್ಕೂಟಿ ಸವಾರರೊಬ್ಬರು ಮೊದಲು ಅಪಘಾತಕ್ಕೀಡಾಗಿದ್ದರು. ಇದನ್ನು ಗಮನಿಸಿದ ಸ್ಥಳೀಯ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಹಲವರು ಗಾಯಾಳುಗಳಿಗೆ ನೆರವಾಗಲು ರಸ್ತೆಬದಿ ಮತ್ತು ಕಲ್ವರ್ಟ್ ಬಳಿ ಜಮಾಯಿಸಿದ್ದರು.

ಈ ವೇಳೆ ತೋರ್ಪಾ ಕಡೆಯಿಂದ ಅತಿವೇಗವಾಗಿ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿ ನಿಂತಿದ್ದ ಜನರ ಮೇಲೆ ಹರಿದಿದೆ. ಪರಿಣಾಮ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ 12 ವರ್ಷದ ಬಾಲಕ ಸೌರಭ್ ನಾಯಕ್ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 11.15ರ ಸುಮಾರಿಗೆ ಖುಂಟಿ ಸದಾಶಿವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಇದರಿಂದ ಸಾವಿನ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಖುಶೂ ಕುಮಾರಿ ಎಂಬುವವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದ ಬಳಿಕ ಲಾರಿ ಚಾಲಕ ಹಾಗೂ ಕ್ಲೀನರ್ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಚಾಲಕ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಸ್ಥಳೀಯರ ನೆರವಿನಿಂದ ಮೃತದೇಹಗಳು ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಪರಾರಿಯಾಗಿರುವ ಲಾರಿ ಚಾಲಕನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಒಂದು ಕ್ಷಣದ ನಿರ್ಲಕ್ಷ್ಯದಿಂದ ಸಂಭವಿಸಿದ ಈ ಭೀಕರ ಅಪಘಾತ ಏಳು ಜೀವಗಳನ್ನು ಬಲಿ ಪಡೆದಿದ್ದು, ಇಡೀ ಪ್ರದೇಶದಲ್ಲಿ ಶೋಕದ ಛಾಯೆ ಆವರಿಸಿದೆ.

Related Articles

Back to top button