*ಉತ್ತರಾಖಂಡ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದ ಉದ್ಯಮಿ ಪ್ರತಾಪ್ ಗೌಡ ಸಾವಿನ ಬೆನ್ನಲ್ಲೇ ತಂದೆಯೂ ವಿಧಿವಶ*

ಪ್ರಗತಿವಾಹಿನಿ ಸುದ್ದಿ: ಕೆಲ ದಿನಗಳ ಹಿಂದೆ ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದ ಉದ್ಯಮಿ ಪ್ರತಾಪ್ ಗೌಡ ಸಾವಿನ ಬೆನ್ನಲ್ಲೇ ಇದೀಗ ಅವರ ತಂದೆಯೂ ಅನಾರೋಗ್ಯದಿಂದ ನಿಧನರಾಗಿದ್ದು, ಮನೆಯಲ್ಲಿ ದು:ಖ ಮಡುಗಟ್ಟಿದೆ.
ನಿಂಗರಾಜು (84) ಸಾವನ್ನಪ್ಪಿದ ಪ್ರತಾಪ್‌ಗೌಡ ಅವರ ತಂದೆ. ಹಾಸನದ ಮನೆಯಲ್ಲಿ ನಿಂಗರಾಜು ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಹಾಸನ ತಾಲ್ಲೂಕಿನ ಜೋಡಿ ಕೃಷ್ಣಾಪುರದಲ್ಲಿ ನಿಂಗರಾಜು ಅವರು ಟೈಲರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ನಂತರ ಸಕಲೇಶಪುರ ತಾಲ್ಲೂಕಿನ ಬಾಚಿಹಳ್ಳಿ ಗ್ರಾಮದಲ್ಲಿ ನೆಲೆಸಿದ್ದರು.
ಆನಂತರ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಪುತ್ರ ಪ್ರತಾಪ್‌ಗೌಡ ಕಂಟ್ರಾಕ್ಟರ್, ಉದ್ಯಮಿಯಾಗಿದ್ದರು. ಮಗನ ಸಾವಿನ ಚಿಂತೆಯಲ್ಲಿದ್ದ ನಿಂಗರಾಜು ಅವರು ನಿನ್ನೆ (ನ.5) ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇಂದು ಬಾಚಿಹಳ್ಳಿ ಗ್ರಾಮದಲ್ಲಿ ನಿಂಗರಾಜು ಅವರ ಅಂತ್ಯಕ್ರಿಯೆ ನೆರವೇರಲಿದೆ.
ಇತ್ತೀಚೆಗೆ ಉದ್ಯಮಿ ಪ್ರತಾಪ್ ಗೌಡ ತಮ್ಮ ಸ್ನೇಹಿತರೊಂದಿಗೆ ಉತ್ತರಾಖಂಡಕ್ಕೆ ಪ್ರವಾಸಕ್ಕೆ ತೆರಳಿದ್ದರು. ಬದ್ರಿನಾಥ ದೇವರ ದರ್ಶನ ಪಡೆದು ಜೋಶಿಮಠದತ್ತ ಹೆಲಿಕಾಪ್ಟರ್ ನಲ್ಲಿ ವಾಪಸ್ ಆಗುತ್ತಿದ್ದಾಗ ವಿಮಾನ ಪತನಗೊಂಡು, ಪ್ರತಾಪ್ ಗೌಡ ಸೇರಿ ಆರು ಜನರು ಸಾವನ್ನಪ್ಪಿದ್ದರು. ಕುಟುಂಬ ಪ್ರತಾಪ್ ಗೌಡ ಅವರನ್ನು ಕಳೆದುಕೊಂಡು ನೋವಿನಲ್ಲಿರುವಾಗಲೇ ಇದೀಗ ಅವರ ತಂದೆ ಕೂಡ ನಿಧನರಾಗಿರುವುದು ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.




