CrimeKannada NewsKarnataka NewsLatest

*ಏಳು ಮಂದಿಯ ಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್‌ ಟ್ವಿಸ್ಟ್*: *ಮಗಳ ಮೇಲೂ ಅನುಮಾನದ ನೆರಳು*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕ್ಯಾಬ್ ಚಾಲಕ ಇಂದುಶೇಖರ್ ಒಬ್ಬನೇ ಇಷ್ಟೊಂದು ಭೀಕರ ಕೃತ್ಯ ಎಸಗಿದ್ದಾನೆಯೇ? ಆತನ ಮಗಳೂ ಇದರಲ್ಲಿ ಭಾಗಿಯಾಗಿದ್ದಳೇ? ಎಂಬ ಅನುಮಾನಗಳು ಇದೀಗ ತನಿಖೆಯ ವೇಳೆ ವ್ಯಕ್ತವಾಗಿವೆ. ಮತ್ತೊಂದೆಡೆ, ಆರೋಪಿ ಮನೆಯಲ್ಲಿ ಪತ್ತೆಯಾದ ಡೈರಿಯಲ್ಲಿ ಪೊಲೀಸ್ ಅಧಿಕಾರಿಗಳ ದೂರವಾಣಿ ಸಂಖ್ಯೆಗಳು ಸಿಕ್ಕಿರುವುದು ಪೊಲೀಸರ ಗಮನ ಸೆಳೆದಿದೆ.

ಡೈರಿಯಲ್ಲಿ IPS ಅಧಿಕಾರಿಗಳ ನಂಬರ್!

ಆರೋಪಿ ಇಂದುಶೇಖರ್ ಮನೆಯಲ್ಲಿ ಡೈರಿ ಪತ್ತೆಯಾಗಿದೆ. ಅದರಲ್ಲಿ ಐಪಿಎಸ್ ಅಧಿಕಾರಿಗಳು ಸೇರಿದಂತೆ ಎಸ್‌ಪಿ, ಎಸಿಪಿ ಮತ್ತು ಇನ್ಸ್‌ಪೆಕ್ಟರ್‌ಗಳ ಹೆಸರು ಹಾಗೂ ದೂರವಾಣಿ ಸಂಖ್ಯೆಗಳು ಬರೆದಿರುವುದು ಬೆಳಕಿಗೆ ಬಂದಿದೆ. ಸಾಮಾನ್ಯ ಕ್ಯಾಬ್ ಚಾಲಕನ ಬಳಿ ಪೊಲೀಸ್ ಅಧಿಕಾರಿಗಳ ಸಂಖ್ಯೆಗಳಿದ್ದದ್ದು ಏಕೆ? ಅವರೊಂದಿಗೆ ಏನಾದರೂ ಸಂಪರ್ಕವಿತ್ತೇ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಗಳ ಮೇಲೂ ಅನುಮಾನದ ಕಣ್ಣು!

ಏಳು ಮಂದಿಯನ್ನು ಹತ್ಯೆ ಮಾಡುವ ಮೊದಲು ಆರೋಪಿ ಅವರಿಗೆ ಮತ್ತಿನ ಮಾತ್ರೆಗಳನ್ನು ನೀಡಿದ್ದ ಎನ್ನಲಾಗಿದೆ. ಅತ್ತೆ ಮತ್ತು ನಾದಿನಿಯರಿಗೆ ಟೀ ಹಾಗೂ ಜ್ಯೂಸ್‌ನಲ್ಲಿ ಮತ್ತಿನ ಮಾತ್ರೆ ಬೆರೆಸಿ ಕುಡಿಸಿದ್ದಾನೆ. ಪ್ರಜ್ಞೆ ತಪ್ಪಿದ ಬಳಿಕ ಹತ್ಯೆ ಮಾಡಿದ್ದಾನೆ. ಭಾಮೈದರಿಗೆ ಮದ್ಯದಲ್ಲಿ ಮಾತ್ರೆ ಬೆರೆಸಿ ಇದೇ ರೀತಿ ಹತ್ಯೆ ಮಾಡಿದ್ದಾನೆ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.

ಹತ್ಯೆ ವೇಳೆ ಸಂತ್ರಸ್ತರು ಕೂಗಾಡದಂತೆ ಮಾಡಲು ಮತ್ತಿನ ಔಷಧ ಬಳಸಿದ್ದಾನೆ. ಈ ಕೃತ್ಯದಲ್ಲಿ ಆರೋಪಿ ತನ್ನ ಮಗಳ ಸಹಾಯ ಪಡೆದಿದ್ದಾನೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಗಳ ವಿಚಾರಣೆಯೂ ನಡೆಯುತ್ತಿದೆ.

ಈ ಪ್ರಕರಣದಲ್ಲಿ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಆರೋಪಿ ಹತ್ಯೆ ಮಾಡುವ ಸಂದರ್ಭದಲ್ಲಿ ನಳಿನಿಯ 11 ವರ್ಷದ ಮಗನನ್ನೂ ತನ್ನ ಜೊತೆಯಲ್ಲೇ ಇರಿಸಿಕೊಂಡಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲ, ಮೃತದೇಹಗಳನ್ನು ಸಾಗಿಸುವಾಗಲೂ ಬಾಲಕನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಏಳು ಮೃತದೇಹಗಳನ್ನು ಬೇರೆ ಬೇರೆ ಕಡೆ ಎಸೆದ ಬಳಿಕ ಬಾಲಕನನ್ನು ಹಲಸೂರು ಗೇಟ್ ಬಳಿ ಬಿಟ್ಟು ಹೋಗಿದ್ದಾನೆ ಎಂದು ವಿಚಾರಣೆ ವೇಳೆ ಆರೋಪಿ ಬಾಯಿ ಬಿಟ್ಟಿದ್ದಾನೆ.

ಪೊಲೀಸರ ಮುಂದೆ ಬಾಲಕ ನೀಡಿರುವ ಹೇಳಿಕೆ ಪ್ರಕರಣದ ಭೀಕರತೆಯನ್ನು ಮತ್ತಷ್ಟು ಬಯಲು ಮಾಡಿದೆ. ಶುಕ್ರವಾರ ತನ್ನನ್ನು ಕಾರಿನಲ್ಲಿ ಕೂರಿಸಿಕೊಂಡು ಹೋದರು. ಬಳಿಕ ಕಾರಿಗೆ ಒಂದು ಚೀಲ ಹಾಕಿದರು. ಅದು ಏನು ಎಂದು ಕೇಳಿದಾಗ ಕಸದ ಚೀಲ ಎಂದು ಉತ್ತರಿಸಿದರು. ಹಾಸನ ರಸ್ತೆಯ ಕಡೆಗೆ ಕರೆದುಕೊಂಡು ಹೋಗಿ, ಒಂದೊಂದೇ ಚೀಲವನ್ನು ಬೇರೆ ಬೇರೆ ಸ್ಥಳಗಳಲ್ಲಿ ಎಸೆದರು ಎಂದು ಬಾಲಕ ಹೇಳಿದ್ದಾನೆ ಎನ್ನಲಾಗಿದೆ.

ಎಲ್ಲವನ್ನೂ ಮುಗಿಸಿದ ಬಳಿಕ ಹಲಸೂರು ಗೇಟ್ ಬಳಿ ತನ್ನನ್ನು ಬಿಟ್ಟು ಹೋದರು. ಉಳಿದವರು ಎಲ್ಲಿ ಎಂದು ಕೇಳಿದಾಗ, ಎಲ್ಲರೂ ಆಲ್ ಇಂಡಿಯಾ ಪ್ರವಾಸಕ್ಕೆ ಹೋಗಿದ್ದಾರೆ. ಮೂರು ತಿಂಗಳ ಬಳಿಕ ವಾಪಸ್ ಬರುತ್ತಾರೆ ಎಂದು ಹೇಳಿದ್ದರು. ಕಸ ಎಸೆದ ಬಳಿಕ ನಿನ್ನನ್ನೂ ಆಲ್ ಇಂಡಿಯಾ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದರು ಎಂದು ಬಾಲಕ ಪೊಲೀಸರಿಗೆ ವಿವರಿಸಿದ್ದಾನೆ ಎನ್ನಲಾಗಿದೆ.

ಇದೀಗ ಡೈರಿಯಲ್ಲಿ ಸಿಕ್ಕಿರುವ ಪೊಲೀಸ್ ಅಧಿಕಾರಿಗಳ ಸಂಖ್ಯೆಗಳು, ಮಗಳ ಮೇಲಿನ ಅನುಮಾನ ಮತ್ತು ಬಾಲಕ ನೀಡಿರುವ ಹೇಳಿಕೆಗಳು ಪ್ರಕರಣದ ತನಿಖೆಯಲ್ಲಿ ಮಹತ್ವ ಪಡೆದುಕೊಂಡಿವೆ. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿಸಿದ್ದಾರೆ.

Related Articles

Back to top button