
ಪ್ರಗತಿವಾಹಿನಿ ಸುದ್ದಿ: ಬೆಳಕಿನ ಹಬ್ಬ ದೀಪಾವಳಿ ಆಚರಿಸಲು ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ಗುಡ್ ನ್ಯೂಸ್. ಹಬ್ಬದ ವೇಳೆ ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ರೈಲು ಸಂಚರಿಸಲಿವೆ.
ಬೆಂಗಳೂರು ಹಾಗೂ ಬೆಳಗಾವಿ ನಡುವೆ ನ.7ರಿಂದ 10ರವರೆಗೆ ವಿಶೇಷ ರೈಲು ಸಂಚರಿಸಲಿವೆ ಈ ಬಗ್ಗೆ ರೈಲ್ವೆ ಇಲಾಖೆ ತಿಳಿಸಿದೆ. ಬೆಂಗಳೂರಿನಿಂದ ಬೆಳಗಾವಿಗೆ ಎರಡು ಟ್ರಿಪ್ ಹಾಗೂ ಬೆಳಗಾವಿಯಿಂದ ಬೆಂಗಳೂರಿಗೆ ಎರಡು ಟ್ರಿಪ್ ವಿಶೇಷ ರೈಲು ಸಂಚಾರ ನಡೆಸಲಿವೆ. ಈ ವಿಶೇಷ ರೈಲು ಬೆಂಗಳೂರು, ತುಮಕೂರು, ದಾವಣಗೆರೆ, ಹಾವೇರಿ ಹಾಗೂ ಹುಬ್ಬಳ್ಳಿ ಮಾರ್ಗವಾಗಿ ಸಂಚರಿಸಲಿದೆ.
ಬೆಂಗಳೂರಿನಿಂದ ಹೊರಡುವ ರೈಲು ನವೆಂಬರ್ 7 ಮತ್ತು 9ರಂದು ರಾತ್ರಿ 7 ಗಂಟೆಗೆ ಹೊರಟು, ಮರುದಿನ ಬೆಳಗ್ಗೆ 8:25ಕ್ಕೆ ಬೆಳಗಾವಿ ತಲುಪಲಿದೆ. ಹಾಗೆಯೇ ಬೆಳಗಾವಿಯಿಂದ ನವೆಂಬರ್ 8 ಮತ್ತು 10ರಂದು ಸಂಜೆ 5:30ಕ್ಕೆ ರೈಲು ಹೊರಟು, ಮರುದಿನ ಬೆಳಗ್ಗೆ 5 ಗಂಟೆಗೆ ಬೆಂಗಳೂರನ್ನು ತಲುಪಲಿದೆ. ಈ ರೈಲು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ ಮತ್ತು ಧಾರವಾಡ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.



