*ಕಾಂಕ್ರೀಟ್ ಕೆಲಸದ ವೇಳೆ ಭೀಕರ ದುರಂತ*: *ಸೆಂಟ್ರಿಂಗ್ ಕುಸಿದು ಮೂವರು ಕಾರ್ಮಿಕರು ಸಾವು*

ಪ್ರಗತಿವಾಹಿನಿ ಸುದ್ದಿ: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಕ್ಷಣಾರ್ಧದಲ್ಲಿ ಅವಘಡ ಸಂಭವಿಸಿ ಮೂವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಾಂಕ್ರೀಟ್ ಕೆಲಸ ಮುಗಿಸಿ ಯಂತ್ರ ತೆರವುಗೊಳಿಸುವ ಸಂದರ್ಭದಲ್ಲಿ ಸೆಂಟ್ರಿಂಗ್ ಸಮೇತ ಕಟ್ಟಡ ಕುಸಿದುಬಿದ್ದಿದೆ. ಪರಿಣಾಮ ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಕುಮರೇಶನ್ (39), ಮೈಕೆಲ್ (26) ಮತ್ತು ಶ್ರೀನಿವಾಸನ್ (26) ಎಂದು ಗುರುತಿಸಲಾಗಿದೆ. ಕಾರ್ಖಾನೆಯೊಂದರ ಸೆಕ್ಯುರಿಟಿ ಗಾರ್ಡ್ ಕೊಠಡಿ ಹಾಗೂ ಆರ್ಚ್ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ 17 ಮಂದಿ ಕಾರ್ಮಿಕರು ಕಾಂಕ್ರೀಟ್ ಮೋಲ್ಡಿಂಗ್ ಕೆಲಸದಲ್ಲಿ ನಿರತರಾಗಿದ್ದರು.
ಕಾಂಕ್ರೀಟ್ ಕೆಲಸ ಪೂರ್ಣಗೊಂಡ ಬಳಿಕ ಮಿಕ್ಸರ್ ಯಂತ್ರವನ್ನು ತೆರವುಗೊಳಿಸುವ ಸಂದರ್ಭದಲ್ಲಿ ಏಕಾಏಕಿ ಸೆಂಟ್ರಿಂಗ್ ಕುಸಿದಿದೆ. ಸಿಮೆಂಟ್ ಕಾಂಕ್ರೀಟ್ ಸಮೇತ ಕಟ್ಟಡದ ಭಾಗ ಕುಸಿದುಬಿದ್ದ ಪರಿಣಾಮ ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡಿರುವ ಘಟನೆ ತಮಿಳುನಾಡಿನ ಹೊಸೂರು ಸಮೀಪದ ಸಿಪ್‌ಕಾಟ್ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕ್ರೇನ್ ಬಳಸಿ ಅವಶೇಷಗಳನ್ನು ತೆರವುಗೊಳಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಹೊಸೂರು, ತಿರುಪತ್ತೂರು ಮತ್ತು ತಿರುವಣ್ಣಾಮಲೈ ಮೂಲದ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಕಟ್ಟಡದ ಮಾಲೀಕ ಮತ್ತು ಮೇಸ್ತ್ರಿಯ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ಮೇಲ್ನೋಟಕ್ಕೆ ಎಂಜಿನಿಯರಿಂಗ್ ಲೋಪವೂ ಕಂಡುಬರುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟಡದ ಎಂಜಿನಿಯರ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಕೃಷ್ಣಗಿರಿ ಜಿಲ್ಲಾಧಿಕಾರಿ ದಿನೇಶ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 17 ಮಂದಿ ಕಾರ್ಮಿಕರ ಪೈಕಿ ಮೂವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಉಳಿದ ಕಾರ್ಮಿಕರನ್ನು ಪತ್ತೆಹಚ್ಚಲಾಗಿದೆ. ಆದರೂ ಕಟ್ಟಡದ ಅವಶೇಷಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಮತ್ತೊಮ್ಮೆ ಶೋಧ ಕಾರ್ಯ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.




