*ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ವ್ಯಕ್ತಿಯೋರ್ವನಿಂದ ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ಚಾಕು ಆರ್ಡರ್*

ಪ್ರಗತಿವಾಹಿನಿ ಸುದ್ದಿ: ರಾಜಕೀಯ ನಾಯಕರು, ಜನಪ್ರತಿನಿಧಿಗಳ ಹಿಡಿತವಿಲ್ಲದ ಮಾತುಗಳ ಪರಿಣಾಮ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾಂಗ್ರೆಸ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ವ್ಯಕ್ತಿಯೊಬ್ಬ ಚಾಕು ಆರ್ಡರ್ ಮಾಡಿರುವ ಘಟನೆ ನಡೆದಿದೆ.
ಇತ್ತೀಚೆಗೆ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ಪಕ್ಷವನ್ನು ತುಂಡು ತುಂಡಾಗಿ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ವ್ಯಕ್ತಿಯೊಬ್ಬರು ಛಲವಾದಿ ಮನೆಗೆ ಚಾಕು ಕಳುಹಿಸಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ಬ್ಲಿಂಕಿಟ್ ಆ್ಯಪ್ ಮೂಲಕ ಚಾಕು ಬುಕ್ಕಿಂಗ್ ಮಾಡಲಾಗಿದೆ. ಈ ಬಗ್ಗೆ ವಿಪಕ್ಷ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಬ್ಲಿಂಕಿಟ್ ಆ್ಯಪ್ ಮೂಲಕ ಚಾಕು ಬುಕ್ಕಿಂಗ್ ಮಾಡಲಾಗಿದೆ. ಹೀಗಾಗಿ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್‌ನಲ್ಲಿರುವ ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ನಾಲ್ವರು ಡೆಲಿವರಿ ಬಾಯ್ಸ್ ಬಂದಿದ್ದಾರೆ. ಈ ವೇಳೆ ಅವರನ್ನು ನಿವಾಸದೊಳಗೆ ಬಿಡದೆ ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಘಟನೆ ಹಿನ್ನೆಲೆ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್‌ನಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಈ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದು, ‘ರಾಜ್ಯದಲ್ಲಿ ಈ ಹಿಂದಿನಿಂದಲೇ ಗೂಂಡಾ ಸಂಸ್ಕೃತಿ ನೋಡಿದ್ದೇವೆ. ಕೊತ್ವಾಲ್ ಸಂಸ್ಕೃತಿ ಇನ್ನೂ ಬದುಕಿದೆ ಎಂಬುದಕ್ಕೆ ಜೀವಂತ ಸಾಕ್ಷಿ ಸಿಗುತ್ತಿದೆ. ಅರಾಜಕತೆ ಸೃಷ್ಟಿಸಿದರೆ ಕಾಂಗ್ರೆಸ್‌ನ್ನು ತುಂಡುತುಂಡು ಮಾಡಿ ಎಸೆಯುತ್ತಾರೆ ಅಂದಿದ್ದೆ. ಕಾಂಗ್ರೆಸ್ ತುಂಡು ಆಗಿರುವುದು ಹೊಸದೇನಲ್ಲ. ಬ್ಲಿಂಕಿಟ್‌ಗೆ ಚಾಕು, ಚೂರಿಗಳನ್ನು ಆರ್ಡರ್ ಮಾಡಿ ನನ್ನ ಮನೆಗೆ ಕಳುಹಿಸುತ್ತಿದ್ದಾರೆ. ಚಾಕು, ಚೂರಿ ಸಂಸ್ಕೃತಿ ಯಾರದ್ದು ಅಂತಾ ದೇಶಕ್ಕೆ ಗೊತ್ತಿದೆ’ ಎಂದು ವಾಗ್ದಾಳಿ ಮಾಡಿದ್ದಾರೆ.
‘ಕೊತ್ವಾಲ್ ಸಂಸ್ಕೃತಿ ಕಾಂಗ್ರೆಸ್‌ನಲ್ಲಿ ಇನ್ನೂ ಬದುಕಿದೆ. ಹಣ ಕೊಟ್ಟು ಆದರೂ ಅದನ್ನು ಕಳುಹಿಸಬಹುದಿತ್ತಲ್ವಾ? ತರಕಾರಿ ಕೊಯ್ಯಲು ಆದರೂ ಪ್ರಯೋಜನ ಆಗುತ್ತಿತ್ತು. ಎನ್‌ಎಸ್‌ಯುಐನ ಇಬ್ಬರು ಹುಡುಗರು ಹೋಗಿ ಹೋಗಿ ಅಂತಾ ಕಳಿಸ್ತಿದ್ರು. ನಾವು ಚಾಕು, ಚೂರಿಗೆಲ್ಲಾ ಹೆದರಲ್ಲ, ನಿಜವಾದ ಅಂಬೇಡ್ಕರ್ ರಕ್ತ ಇಲ್ಲಿದೆ. ನೀವು ಎಷ್ಟು ಚಾಕು, ಚೂರಿ ಕಳುಹಿಸುತ್ತೀರೋ ಕಳುಹಿಸಿ, ಚಾಕು ಬುಕ್ಕಿಂಗ್ ಮಾಡುವಾಗ ಅದಕ್ಕೆ ದುಡ್ಡು ಕೊಟ್ಟು ಕಳುಹಿಸಿ. ಫ್ರೇಮ್ ಹಾಕಿಸಿ ಮನೆ ಬಾಗಿಲಲ್ಲಿ ಕಾಂಗ್ರೆಸ್ ಕೊಡುಗೆ ಅಂತಾ ಇರಿಸುತ್ತೇನೆ. ಇದನ್ನೆಲ್ಲಾ ನ್ಯಾಯಾಲಯದಲ್ಲಿ ನೋಡಿಕೊಳ್ಳುತ್ತೇನೆ’ ಎಂದು ಕಿಡಿಕಾರಿದ್ದಾರೆ.
‘ವಿನಯ್ ಕುಮಾರ್.ಎನ್ ಎಂಬ ಹೆಸರಿನಲ್ಲಿ ಚಾಕು ಬುಕ್ ಮಾಡಿದ್ದಾರೆ. ಸುಮಾರು 20 ನಂಬರ್‌ಗಳಿಂದ ಚಾಕು, ಚೂರಿ ಬುಕ್ ಮಾಡಿದ್ದಾರೆ. ನನ್ನ ಆಪ್ತ ಸಹಾಯಕ ಮಲ್ಲಪ್ಪ ಹೆಸರಿಗೂ ಚಾಕು ಬುಕ್ ಮಾಡಿದ್ದಾರೆ. ನನಗೆ ಸುಮಾರು ಬ್ಲಿಂಕಿಟ್ ಕಾಲ್‌ಗಳು ಬರುತ್ತಿವೆ. ಕಾಂಗ್ರೆಸ್ ಕಮಂಗಿಗಳೇ ನಿಮ್ಮ ಬಗ್ಗೆ ಈಗಲೂ ಗೌರವ ಇಟ್ಟು ಮಾತಾಡುತ್ತೇನೆ. ಚಾಕು, ಚೂರಿ ರಾಜಕಾರಣ ಮಾಡಬಾರದು, ತಿಳಿದುಕೊಳ್ಳಿ. ತಿಳಿದುಕೊಳ್ಳದೇ ಇದ್ದರೆ ಜನ ತಿಳಿಸುತ್ತಾರೆ. ಹಣಕೊಡುವ ಯೋಗ್ಯತೆ ಇಲ್ಲದವರು ಯಾವ ಮುಖ ಇಟ್ಟುಕೊಂಡು ಕಳಿಸ್ತೀರಿ’ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.



