
ಪ್ರಗತಿವಾಹಿನಿ ಸುದ್ದಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಆರೋಪದ ಮೇಲೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಪತಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ನಂಬಿಸಲು ಯತ್ನಿಸಿದ್ದ ಪತ್ನಿಯ ನಾಟಕ ಮರಣೋತ್ತರ ಪರೀಕ್ಷೆಯಿಂದ ಬಯಲಾಗಿದೆ.
ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ!
ಅಕ್ಟೋಬರ್ 12ರಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ದೊಡ್ಡತೋಗೂರಿನ ಮನೆಯಲ್ಲಿ ಉಪೇಂದ್ರ (40) ಎಂಬುವವರು ಮಧ್ಯರಾತ್ರಿ ಮೃತಪಟ್ಟಿದ್ದರು. ಪತಿ ಜಾರಿ ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪತ್ನಿ ಅನಿತಾ ಕುಟುಂಬಸ್ಥರಿಗೆ ತಿಳಿಸಿದ್ದಳು. ಮೃತದೇಹದ ಮುಂದೆ ಕಣ್ಣೀರಿಟ್ಟು ಸಾವಿನ ಬಗ್ಗೆ ಅನುಮಾನ ಬಾರದಂತೆ ನಾಟಕವಾಡಿದ್ದಳು.
ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇತ್ತೀಚೆಗೆ ಬಂದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಪೇಂದ್ರ ಉಸಿರುಗಟ್ಟಿ ಮೃತಪಟ್ಟಿರುವುದು ದೃಢಪಟ್ಟಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದರು.
ಘಟನೆಯ ರಾತ್ರಿ ಉಪೇಂದ್ರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಬಂದಿದ್ದ ಬಗ್ಗೆ ಪೊಲೀಸರಿಗೆ ಲಭ್ಯವಾಗಿತ್ತು. ಈ ಸುಳಿವಿನ ಆಧಾರದಲ್ಲಿ ಮಧುಸೂಧನ್‌ನನ್ನು ವಶಕ್ಕೆ ಪಡೆದು ಅನಿತಾಳೊಂದಿಗೆ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣದ ವಿವರಗಳು ಹೊರಬಂದಿವೆ.
ಅನಿತಾ ಮತ್ತು ಮಧುಸೂಧನ್ ಹಲವು ವರ್ಷಗಳಿಂದ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದಿದ್ದ ಉಪೇಂದ್ರ, ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ. ಅಕ್ಟೋಬರ್ 11ರ ರಾತ್ರಿ ಕೂಡ ದಂಪತಿ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಅನಿತಾ ತನ್ನ ಪ್ರಿಯಕರ ಮಧುಸೂಧನ್‌ಗೆ ಕರೆ ಮಾಡಿ, ಪತಿ ಗಲಾಟೆ ಮಾಡುತ್ತಿರುವುದಾಗಿ ತಿಳಿಸಿ ಮನೆಗೆ ಬಂದು ಕೊಲೆ ಮಾಡುವಂತೆ ಹೇಳಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಅನಿತಾಳ ಕರೆ ಮೇರೆಗೆ ಮನೆಗೆ ಬಂದ ಮಧುಸೂಧನ್, ಮಲಗಿದ್ದ ಉಪೇಂದ್ರನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅನಿತಾ ಕೂಡ ಪತಿಯ ಬಾಯಿ ಮತ್ತು ಮೂಗನ್ನು ಮುಚ್ಚಿ ಸಹಕರಿಸಿದ್ದಳು. ಬಳಿಕ ಮಧುಸೂಧನ್ ಉಪೇಂದ್ರನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯ ಬಳಿಕ ಮಧುಸೂಧನ್‌ನನ್ನು ಅಲ್ಲಿಂದ ಕಳುಹಿಸಿದ್ದ ಅನಿತಾ, ಕುಟುಂಬಸ್ಥರ ಮುಂದೆ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಹೇಳಿದ್ದಳು. ಆದರೆ ಮರಣೋತ್ತರ ಪರೀಕ್ಷೆಯ ವರದಿ ಮತ್ತು ಪೊಲೀಸರ ತನಿಖೆಯಿಂದ ಪ್ರಕರಣದ ಸತ್ಯಾಂಶ ಬಯಲಾಗಿದೆ. ಸದ್ಯ ಪತ್ನಿ ಅನಿತಾ ಮತ್ತು ಆಕೆಯ ಪ್ರಿಯಕರ ಮಧುಸೂಧನ್‌ನನ್ನು ಬಂಧಿಸಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




