Kannada NewsKarnataka NewsLatestPolitics

*ಪೆಟ್ರೋಲ್‌ಗೆ ಶೇ.30ಕ್ಕೂ ಹೆಚ್ಚು ಎಥೆನಾಲ್ ಮಿಶ್ರಣ ಆರೋಪ*: *ಕೇಂದ್ರದ ವಿರುದ್ಧ ಸಚಿವ ರಿಜ್ವಾನ್ ಅರ್ಷದ್ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಪೆಟ್ರೋಲ್‌ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ. ಕರ್ನಾಟಕದಲ್ಲಿ ಸಂಗ್ರಹಿಸಿದ ಮಾದರಿಗಳಲ್ಲಿ ಶೇ.31.2ರಷ್ಟು ಎಥೆನಾಲ್ ಪತ್ತೆಯಾಗಿದೆ ಎಂಬ ವರದಿಯ ಬೆನ್ನಲ್ಲೇ, ತೈಲ ಕಂಪನಿಗಳು ನೇರ ಉತ್ತರ ನೀಡುತ್ತಿಲ್ಲ ಎಂದು ಸಚಿವ ರಿಜ್ವಾನ್ ಅರ್ಷದ್ ಆರೋಪಿಸಿದ್ದಾರೆ.

ತೈಲ ಕಂಪನಿಗಳ ಉತ್ತರಕ್ಕೆ ಸಚಿವರ ಆಕ್ಷೇಪ!

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಕಳೆದ ಶುಕ್ರವಾರ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಪೆಟ್ರೋಲ್‌ನಲ್ಲಿನ ಎಥೆನಾಲ್ ಪ್ರಮಾಣವನ್ನು ಪರೀಕ್ಷೆ ಮಾಡಿಸಲಾಗಿದೆ. ಈ ವಿಚಾರ ರಾಷ್ಟ್ರವ್ಯಾಪಿ ಚರ್ಚೆಯಾಗಿದ್ದು, ಶೇ.30ಕ್ಕೂ ಹೆಚ್ಚು ಎಥೆನಾಲ್ ಮಿಶ್ರಣದಿಂದ ಪ್ರತಿದಿನ ಪೆಟ್ರೋಲ್ ಬಳಸುವ ಜನರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ. ರಾಜ್ಯ ಸರ್ಕಾರ ನೀಡಿದ ವರದಿಗೆ ಕೇಂದ್ರ ಸರ್ಕಾರ ನೇರವಾಗಿ ಉತ್ತರಿಸಬೇಕಿತ್ತು. ಆದರೆ ತೈಲ ಮಾರಾಟ ಕಂಪನಿಗಳ ಮೂಲಕ ತಾಂತ್ರಿಕ ವಿವರಣೆ ನೀಡಿಸಿದೆ ಎಂದು ಆಕ್ಷೇಪಿಸಿದ್ದಾರೆ.

ನಾವು ನೀಡಿರುವ ವರದಿಯ ಬಗ್ಗೆ ಗಟ್ಟಿಯಾಗಿ ನಿಂತಿದ್ದೇವೆ. ವರದಿ ಸರಿಯಾಗಿದೆ. ಆದರೆ ತೈಲ ಕಂಪನಿಗಳು ಎಷ್ಟು ಪ್ರಮಾಣದ ಎಥೆನಾಲ್ ಮಿಶ್ರಣವಾಗಿದೆ ಎಂಬ ಪ್ರಶ್ನೆಗೆ ನೇರ ಉತ್ತರ ನೀಡಿಲ್ಲ ಎಂದು ರಿಜ್ವಾನ್ ಅರ್ಷದ್ ಹೇಳಿದ್ದಾರೆ.

ಎಥೆನಾಲ್‌ನಲ್ಲಿ ಕ್ಲೋರೈಡ್ ಮತ್ತು ಸಲ್ಫರ್ ಪ್ರಮಾಣ ಹೆಚ್ಚಿರುವುದರಿಂದ ವಾಹನಗಳ ಇಂಜಿನ್‌ಗೆ ಹಾನಿಯಾಗುತ್ತಿದೆ ಎಂಬ ಆತಂಕವನ್ನೂ ಸಚಿವರು ವ್ಯಕ್ತಪಡಿಸಿದ್ದಾರೆ. ಶೇ.30ರಷ್ಟು ಎಥೆನಾಲ್ ಮಿಶ್ರಣದಿಂದ ಸಮಸ್ಯೆಯಾಗುತ್ತದೆ ಎಂದು BMW ಹೇಳಿದೆ ಎಂದು ಉಲ್ಲೇಖಿಸಿದ್ದಾರೆ.

ತೈಲ ಕಂಪನಿಗಳು ತಮ್ಮ ಸ್ಯಾಂಪಲ್‌ಗಳು ಸರಿಯಾಗಿಲ್ಲ ಎಂದು ಹೇಳುತ್ತಿವೆ. ಆದರೆ ರಾಜ್ಯ ಸರ್ಕಾರ ಸಂಗ್ರಹಿಸಿದ ಮಾದರಿಗಳು ಸರಿಯಾಗಿವೆ. ಎಥೆನಾಲ್ ಪ್ರಮಾಣ ಪತ್ತೆಹಚ್ಚುವುದು ರಾಕೆಟ್ ಸೈನ್ಸ್ ಅಲ್ಲ. ಇಲ್ಲಿ ಆರೋಪಿಗಳೂ ಅವರೇ, ನ್ಯಾಯಾಧೀಶರೂ ಅವರೇ ಎಂಬ ರೀತಿಯಲ್ಲಿ ಸಚಿವರು ತೈಲ ಕಂಪನಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೇರಳದಲ್ಲೂ ಪೆಟ್ರೋಲ್ ಮಾದರಿ ಪರೀಕ್ಷೆ!

ಇದೇ ವಿಚಾರವಾಗಿ ಕೇರಳದಲ್ಲೂ ಪರಿಶೀಲನೆ ಆರಂಭವಾಗಿದೆ. ಕರ್ನಾಟಕದ ಪೆಟ್ರೋಲ್ ಮಾದರಿಗಳಲ್ಲಿ ಶೇ.31.2ರಷ್ಟು ಎಥೆನಾಲ್ ಪತ್ತೆಯಾಗಿದೆ ಎಂಬ ವರದಿಯ ಬೆನ್ನಲ್ಲೇ, ಕೇರಳದ ನಾಲ್ಕು ಜಿಲ್ಲೆಗಳಲ್ಲಿ ಮಾದರಿಗಳನ್ನು ಸಂಗ್ರಹಿಸಲಾಗಿದೆ.

ತಿರುವನಂತಪುರಂ, ಎರ್ನಾಕುಲಂ, ಕೋಝಿಕ್ಕೋಡ್ ಮತ್ತು ಕಣ್ಣೂರಿನ ತಲಾ ಐದು ಪೆಟ್ರೋಲ್ ಬಂಕ್‌ಗಳಿಂದ ಮಾದರಿಗಳನ್ನು ಪಡೆದು ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹತ್ತು ದಿನಗಳೊಳಗೆ ಪರೀಕ್ಷಾ ವರದಿ ಬರುವ ನಿರೀಕ್ಷೆಯಿದೆ. ಶೇ.20ಕ್ಕಿಂತ ಹೆಚ್ಚು ಎಥೆನಾಲ್ ಪತ್ತೆಯಾದರೆ ಪೆಟ್ರೋಲ್ ಬಂಕ್‌ಗಳನ್ನು ಸೀಲ್ ಮಾಡಿ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ, ಪೆಟ್ರೋಲ್‌ನಲ್ಲಿನ ಎಥೆನಾಲ್ ಪ್ರಮಾಣದ ಕುರಿತು ಕರ್ನಾಟಕದಲ್ಲಿ ಆರಂಭವಾದ ವಿವಾದ ಇದೀಗ ಕೇರಳಕ್ಕೂ ವ್ಯಾಪಿಸಿದೆ. ಪರೀಕ್ಷಾ ವರದಿಗಳು ಹೊರಬಂದ ಬಳಿಕ ಈ ಆರೋಪಗಳಿಗೆ ಮತ್ತಷ್ಟು ಸ್ಪಷ್ಟತೆ ಸಿಗಬೇಕಿದೆ.

Related Articles

Back to top button