Film & EntertainmentKannada NewsKarnataka NewsLatest

*‘ರಾಮಾಯಣ’ ಪೈರಸಿ ಮಾಡಿದರೆ ಕಾದಿದೆ ಕಾನೂನು ಸಂಕಷ್ಟ*: *ನಿರ್ಮಾಪಕರಿಂದ ಖಡಕ್ ವಾರ್ನಿಂಗ್!*

ಪ್ರಗತಿವಾಹಿನಿ ಸುದ್ದಿ: ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟನೆಯ ‘ರಾಮಾಯಣ: ಪಾರ್ಟ್ 1’ ಸಿನಿಮಾ ಪೈರಸಿ ಮಾಡುವವರಿಗೆ ನಿರ್ಮಾಪಕರು ಕಠಿಣ ಎಚ್ಚರಿಕೆ ನೀಡಿದ್ದಾರೆ. ಚಿತ್ರಮಂದಿರಗಳಲ್ಲಿ ಮೊಬೈಲ್ ಮೂಲಕ ದೃಶ್ಯಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಲೀಗಲ್ ನೋಟಿಸ್ ನೀಡಿದ್ದಾರೆ.

ಚಿತ್ರಮಂದಿರಗಳಲ್ಲಿ ಕೆಲವರು ಸಿನಿಮಾದ ದೃಶ್ಯಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳು ಹಾಗೂ ಮೆಸೇಜಿಂಗ್ ಆ್ಯಪ್‌ಗಳಲ್ಲಿ ಹಂಚಿಕೊಳ್ಳುತ್ತಿರುವುದು ಚಿತ್ರತಂಡದ ಗಮನಕ್ಕೆ ಬಂದಿದೆ. ಇಂತಹ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ನಿರ್ಮಾಪಕರು ನೀಡಿದ್ದಾರೆ.

ನೋಟಿಸ್‌ನಲ್ಲಿ ನವೆಂಬರ್ 2 ಮತ್ತು ನವೆಂಬರ್ 6ರಂದು ಮುಂಬೈ ಹೈಕೋರ್ಟ್ ನೀಡಿರುವ ಆದೇಶಗಳನ್ನು ಉಲ್ಲೇಖಿಸಲಾಗಿದೆ. ಅನುಮತಿಯಿಲ್ಲದೆ ಸಿನಿಮಾದ ಯಾವುದೇ ಭಾಗವನ್ನು ರೆಕಾರ್ಡ್ ಮಾಡುವುದು, ಅಪ್‌ಲೋಡ್ ಮಾಡುವುದು ಅಥವಾ ಹಂಚಿಕೊಳ್ಳುವುದನ್ನು ನ್ಯಾಯಾಲಯ ನಿಷೇಧಿಸಿದೆ ಎಂದು ಚಿತ್ರತಂಡ ತಿಳಿಸಿದೆ.

ಇದು ಕೇವಲ ಕಾಪಿರೈಟ್ ಉಲ್ಲಂಘನೆಯಲ್ಲ, ಕ್ರಿಮಿನಲ್ ಅಪರಾಧವೂ ಹೌದು ಎಂದು ನಿರ್ಮಾಪಕರು ಎಚ್ಚರಿಸಿದ್ದಾರೆ. ಕಾಪಿರೈಟ್ ಕಾಯ್ದೆ 1957, ಸಿನಿಮಾಟೋಗ್ರಾಫ್ ಕಾಯ್ದೆ 1952, ಭಾರತೀಯ ನ್ಯಾಯ ಸಂಹಿತೆ 2023 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಅಡಿಯಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಸಿನಿಮಾ ಬಿಡುಗಡೆಯ ದಿನವೇ ಸನ್ನಿ ಡಿಯೋಲ್ ಅವರ ಹನುಮಾನ್ ಪಾತ್ರದ ಪೋಸ್ಟ್-ಕ್ರೆಡಿಟ್ ದೃಶ್ಯ ಹಾಗೂ ಹನುಮಾನ್ ಚಾಲೀಸಾ ಹಾಡನ್ನು ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡಿತ್ತು. ಆದರೆ ಇದೀಗ ಸಿನಿಮಾದ ಅಂತಾರಾಷ್ಟ್ರೀಯ ಆವೃತ್ತಿಯ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿ ವೈರಲ್ ಆಗಿದೆ. ಹಿಂದಿ ಆವೃತ್ತಿಯಲ್ಲಿ ಕತ್ತರಿಸಲಾಗಿದ್ದ ದೃಶ್ಯ ಇದಾಗಿದೆ ಎನ್ನಲಾಗಿದೆ.

ಒಟ್ಟಿನಲ್ಲಿ, ಚಿತ್ರದ ದೃಶ್ಯಗಳನ್ನು ಅನಧಿಕೃತವಾಗಿ ಹಂಚಿಕೊಳ್ಳುವವರ ವಿರುದ್ಧ ಕಠಿಣ ಕ್ರಮಕ್ಕೆ ನಿರ್ಮಾಪಕರು ಮುಂದಾಗಿದ್ದಾರೆ. ಹೀಗಾಗಿ ಸಿನಿಮಾ ಪೈರಸಿಯಲ್ಲಿ ತೊಡಗುವವರಿಗೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

Related Articles

Back to top button