Kannada NewsKarnataka NewsLatestPolitics

*ಮೂರು ತಿಂಗಳಿಂದ ಆಸ್ಪತ್ರೆಯಲ್ಲಿರುವ ಕಂದಮ್ಮನಿಗೆ ಮಿಡಿದ ಹೆಚ್‌ಡಿಕೆ ಹೃದಯ*: *ನನ್ನದೇ ಜವಾಬ್ದಾರಿ ಎಂದ ಕುಮಾರಸ್ವಾಮಿ*

ಪ್ರಗತಿವಾಹಿನಿ ಸುದ್ದಿ: ಕಳೆದ ಮೂರು ತಿಂಗಳಿಂದ ಬೆಂಗಳೂರಿನ  ಕ್ಲೌಡ್‌ನೈನ್‌ ಆಸ್ಪತ್ರೆಯಲ್ಲಿ ಕೋಮದಲ್ಲಿರುವ ಕಂದಮ್ಮನ ಸ್ಥಿತಿ ಕಂಡು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭಾವುಕರಾಗಿದ್ದಾರೆ. ಮಗುವಿನ ಚಿಕಿತ್ಸೆಗೆ ಎಷ್ಟೇ ಖರ್ಚಾದರೂ ತಾವೇ ಭರಿಸುವುದಾಗಿ ಭರವಸೆ ನೀಡಿದ್ದಾರೆ. ವೈದ್ಯಕೀಯ ನಿರ್ಲಕ್ಷ್ಯದ ಆರೋಪಗಳ ನಡುವೆಯೇ ಆಸ್ಪತ್ರೆಗೆ ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪೋಷಕರ ದುಃಖ ಮತ್ತು ಆಕ್ರೋಶ ಕಂಡು ಕಣ್ಣೀರು ಬರುತ್ತದೆ. ವೈದ್ಯರ ನಿರ್ಲಕ್ಷ್ಯವೋ ಅಥವಾ ಔಷಧಿಯ ವ್ಯತ್ಯಾಸವೋ ಎಂಬುದು ಸದ್ಯಕ್ಕೆ ತಿಳಿದಿಲ್ಲ. ಆದರೆ ಮಗು ಸಂಪೂರ್ಣ ಗುಣಮುಖವಾಗಿ ಮೊದಲಿನಂತೆ ಆಟವಾಡುವಂತಾಗಬೇಕು. ಚಿಕಿತ್ಸೆಗೆ ಎಷ್ಟೇ ವೆಚ್ಚವಾದರೂ ಅದರ ಸಂಪೂರ್ಣ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು.

ಮಗುವಿನ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂಬುದನ್ನು ಹೊರಗಿನ ವೈದ್ಯರೊಂದಿಗೂ ಮಾತನಾಡಿ ಖಚಿತಪಡಿಸಿಕೊಂಡಿದ್ದೇನೆ. ಅಗತ್ಯವಿದ್ದರೆ ಹೊರಗಿನಿಂದ ತಜ್ಞ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಮಗುವಿಗೆ ಪ್ರತ್ಯೇಕ ವಿಶೇಷ ಕೊಠಡಿ ವ್ಯವಸ್ಥೆ ಮಾಡುವಂತೆ ಆಸ್ಪತ್ರೆ ಆಡಳಿತ ಮಂಡಳಿಗೆ ಮನವಿ ಮಾಡಿದ್ದು, ಅದಕ್ಕೆ ಒಪ್ಪಿಗೆ ಸಿಕ್ಕಿದೆ ಎಂದು ಹೆಚ್‌ಡಿಕೆ ಹೇಳಿದ್ದಾರೆ.

ಆರಂಭದಲ್ಲೇ ವೈದ್ಯರು ಪೋಷಕರಿಗೆ ಸರಿಯಾದ ಮಾಹಿತಿ ನೀಡಿ ಧೈರ್ಯ ತುಂಬಿದ್ದರೆ ಇಷ್ಟೊಂದು ಗೊಂದಲ ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಗುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಈಗ ಸಂಘರ್ಷಕ್ಕೆ ಇಳಿಯುವುದಕ್ಕಿಂತ ಮಗುವನ್ನು ಗುಣಪಡಿಸುವುದು ಮುಖ್ಯ. ವೈದ್ಯರು ಕೂಡ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಭರವಸೆ ನೀಡಿದ್ದಾರೆ. ಮಗು ಶೀಘ್ರ ಗುಣಮುಖವಾಗುವಂತೆ ಉತ್ತಮ ಚಿಕಿತ್ಸೆ ಮುಂದುವರಿಸುವಂತೆ ಸೂಚಿಸಲಾಗಿದೆ ಎಂದರು.

ಒಟ್ಟಿನಲ್ಲಿ, ಮಗುವಿನ ಚಿಕಿತ್ಸೆಯ ಹೊಣೆ ಹೊತ್ತುಕೊಳ್ಳುವ ಮೂಲಕ ಕುಮಾರಸ್ವಾಮಿ ಪೋಷಕರಿಗೆ ಧೈರ್ಯ ತುಂಬಿದ್ದಾರೆ. ಇದೀಗ ಕಂದಮ್ಮ ಸಂಪೂರ್ಣ ಗುಣಮುಖವಾಗಲಿ ಎಂಬುದೇ ಎಲ್ಲರ ಆಶಯ.

Related Articles

Back to top button