Kannada NewsKarnataka NewsLatest

*ನಂದಿನಿ ಹಾಲಿನ ಪ್ಯಾಕೆಟ್‌ನಲ್ಲಿ ಜೇಡ ಪತ್ತೆ*: *ದೂರು ನೀಡಿದ ಡಾ.ಅಬ್ದುಲ್ ಕಲಾಂ ಸಂಬಂಧಿ*

ಪ್ರಗತಿವಾಹಿನಿ ಸುದ್ದಿ: ಅರ್ಧ ಲೀಟರ್​​ನ ನಂದಿನಿ ಹಾಲಿನ ಪ್ಯಾಕೆಟ್‌ನಲ್ಲಿ ಸತ್ತ ಜೇಡ ಪತ್ತೆಯಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಮಹಿಳೆಯೊಬ್ಬರು ಕೆಎಂಎಫ್​​ಗೆ ದೂರು ನೀಡಿದ್ದಾರೆ.

ಪಾತ್ರೆಗೆ ಹಾಲು ಸುರಿಯುತ್ತಿದ್ದಾಗ ನಂಡಿನಿ ಹಾಲಿನಲ್ಲಿ ಸತ್ತ ಜೇಡ ಪತ್ತೆಯಾಗಿದೆ ಎಂದು ಮಹಿಳೆ ದೂರು ನೀಡಿದ್ದಾರೆ. ಈ ಘಟನೆ ಹಾಲಿನ ಸಂಸ್ಕರಣಾ ಘಟಕಗಳಲ್ಲಿನ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣದ ಬಗ್ಗೆಯೇ ಆತಂಕ ಮೂಡಿಸಿದೆ.

ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಂಬಂಧಿ ನಾಗೂರ್ ರೋಜಾ ಅವರು ಭಾನುವಾರ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಫ್ರಿಡ್ಜ್‌ನಲ್ಲಿಟ್ಟಿದ್ದ ಹಾಲಿನ ಪ್ಯಾಕೆಟ್ ತೆರೆದು, ಕುದಿಸಲು ಪಾತ್ರೆಗೆ ಹಾಲು ಸುರಿಯುತ್ತಿದ್ದಾಗ ಅದರೊಂದಿಗೆ ಸಣ್ಣ ಸತ್ತ ಜೇಡವೊಂದು ಪತ್ತೆಯಾಗಿದೆ. ಇದನ್ನು ಕಂಡು ಆಘಾತವಾಯಿತು ಎಂದು ಅವರು ಹೇಳಿದ್ದಾರೆ.

ಕಳೆದ ಸುಮಾರು ಎರಡು ದಶಕಗಳಿಂದ ತಮ್ಮ ಕುಟುಂಬ ನಂದಿನಿ ಹಾಲು ಮತ್ತು ಕೆಎಂಎಫ್‌ನ ಇತರ ಉತ್ಪನ್ನಗಳನ್ನು ಖರೀದಿಸುತ್ತಿದೆ. ಸಾಮಾನ್ಯವಾಗಿ ಹಾಲಿನ ಪ್ಯಾಕೆಟ್‌ಗಳನ್ನು ಮಾರಾಟಗಾರರಿಂದ ಮುಚ್ಚಿದ ಬಾಕ್ಸ್‌ನಲ್ಲಿ ಪಡೆಯಲಾಗುತ್ತದೆ. ಬಳಿಕ ನೀರಿನಲ್ಲಿ ತೊಳೆದು ಫ್ರಿಡ್ಜ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಈ ಬಾರಿಯೂ ಅದೇ ಕ್ರಮ ಅನುಸರಿಸಿದ ನಂತರ ಪ್ಯಾಕೆಟ್ ತೆರೆದಿದ್ದಾಗಿ ಅವರು ತಿಳಿಸಿದ್ದಾರೆ.

ಜೇಡ ಪತ್ತೆಯಾದ ತಕ್ಷಣ ಅದರ ವಿಡಿಯೋ ಚಿತ್ರೀಕರಿಸಿ ರೋಜಾ ಅವರು ಹಾಲಿನ ಮಾರಾಟಗಾರರಿಗೆ ಕಳುಹಿಸಿದ್ದು, ಪ್ಯಾಕೆಟ್ ಅನ್ನು ಎಸೆಯುವಂತೆ ಮಾರಾಟಗಾರರು ಸಲಹೆ ನೀಡಿದ್ದಾರೆ. ಆದರೆ, ಆಹಾರ ಉತ್ಪನ್ನದಲ್ಲಿ ಇಂತಹ ಹೊರಗಿನ ವಸ್ತು ಪತ್ತೆಯಾಗಿರುವುದು ಗಂಭೀರ ಆಹಾರ ಸುರಕ್ಷತಾ ವಿಚಾರವಾಗಿರುವುದರಿಂದ ಅವರು ಪ್ಯಾಕೆಟ್ ಎಸೆಯಲು ನಿರಾಕರಿಸಿದ್ದಾರೆ. ನಂತರ ಕೆಎಂಎಫ್‌ನ ಘಟಕವಾದ ಮದರ್ ಡೇರಿಯ ಮಾರ್ಕೆಟಿಂಗ್ ಮ್ಯಾನೇಜರ್‌ಗೆ ಇಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಸೆಕ್ಷನ್ 26, 27 ಮತ್ತು 54ರ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಈ ಸಂಬಂಧ ಕೆಎಂಎಫ್‌ನ ಇಬ್ಬರು ಅಧಿಕಾರಿಗಳು ರೋಜಾ ಅವರ ಮನೆಗೆ ಭೇಟಿ ನೀಡಿ ಹಾಲಿನ ಮಾದರಿ ಮತ್ತು ಪ್ಯಾಕೆಟ್‌ ಅನ್ನು ಪರಿಶೀಲನೆಗಾಗಿ ಸಂಗ್ರಹಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಿ, ಹಾಲು ಪ್ಯಾಕಿಂಗ್ ಮಾಡಿದ ಘಟಕವನ್ನು ಪತ್ತೆಹಚ್ಚುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ರೋಜಾ ತಿಳಿಸಿರುವುದಾಗಿ ವರದಿಯಾಗಿದೆ.

Related Articles

Back to top button