
ಪ್ರಗತಿವಾಹಿನಿ ಸುದ್ದಿ: ರಾಜ್ಯದ ಎಲ್ಲಾ ರೇಷನ್ ಕಾರ್ಡ್ದಾರರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಮಹತ್ವದ ಸೂಚನೆ ನೀಡಿದೆ. ರೇಷನ್ ಕಾರ್ಡ್ಗೆ ಸಂಬಂಧಿಸಿದ ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನವೆಂಬರ್ 10ರ ಮಂಗಳವಾರ ಕೊನೆಯ ದಿನವಾಗಿದೆ. ಹೀಗಾಗಿ, ಇನ್ನು ಇ-ಕೆವೈಸಿ ಮಾಡಿಸಿಕೊಳ್ಳದ ಫಲಾನುಭವಿಗಳು ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಇಲಾಖೆ ಮನವಿ ಮಾಡಿದೆ.
ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಯಾವುದೇ ಅಡೆತಡೆಯಿಲ್ಲದೆ ತಲುಪಿಸುವ ಉದ್ದೇಶದಿಂದ ಇ-ಕೆವೈಸಿ ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಆನ್ಲೈನ್ ಮತ್ತು ಆಫ್ಲೈನ್ ಎರಡೂ ವಿಧಾನಗಳಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಮೊಬೈಲ್ನಲ್ಲೇ ಇ-ಕೆವೈಸಿ ಮಾಡಿಕೊಳ್ಳಿ
ಮನೆಯಲ್ಲೇ ಕುಳಿತು ಇ-ಕೆವೈಸಿ ಪೂರ್ಣಗೊಳಿಸಲು ಬಯಸುವವರು ‘ಅನ್ನಸೇವೆ’, ‘Mera Ration’ ಅಥವಾ ‘Mera eKYC’ ಮೊಬೈಲ್ ಆ್ಯಪ್ಗಳ ಮೂಲಕ ಪ್ರಕ್ರಿಯೆ ಕೈಗೊಳ್ಳಬಹುದು. ಇದಕ್ಕಾಗಿ ‘Aadhaar FaceRD’ ಆ್ಯಪ್ ಬಳಸಿಕೊಂಡು ಮುಖದ ಗುರುತಿನ ದೃಢೀಕರಣ (Face Authentication) ಅಥವಾ ಒಟಿಪಿ ಮೂಲಕ ಇ-ಕೆವೈಸಿ ಪೂರ್ಣಗೊಳಿಸಬಹುದು. ಇದಕ್ಕೆ ರೇಷನ್ ಕಾರ್ಡ್ ಸಂಖ್ಯೆ ಹಾಗೂ ಅದಕ್ಕೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ.
ನ್ಯಾಯಬೆಲೆ ಅಂಗಡಿಗಳಲ್ಲೂ ಅವಕಾಶ
ಮೊಬೈಲ್ ಮೂಲಕ ಇ-ಕೆವೈಸಿ ಮಾಡಿಕೊಳ್ಳಲು ಸಾಧ್ಯವಾಗದವರು ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಬಯೋಮೆಟ್ರಿಕ್ ವ್ಯವಸ್ಥೆಯ ಮೂಲಕ ಬೆರಳಚ್ಚು ನೀಡಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಇನ್ನು ರೇಷನ್ ಕಾರ್ಡ್ನ ಇ-ಕೆವೈಸಿ ಸ್ಥಿತಿಯನ್ನು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಿಕೊಳ್ಳಲು ಅವಕಾಶವಿದೆ. ಕೊನೆಯ ದಿನವಾದ ಇಂದು ಯಾವುದೇ ವಿಳಂಬ ಮಾಡದೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಇಲಾಖೆ ರೇಷನ್ ಕಾರ್ಡ್ದಾರರಿಗೆ ಸೂಚಿಸಿದೆ.



