Kannada NewsKarnataka NewsLatestWorld

*ಅಮೆರಿಕದಲ್ಲಿ ದೀಪಾವಳಿಗೆ ಅಧಿಕೃತ ರಜೆ?*: *ಮತ್ತೆ ಮುನ್ನೆಲೆಗೆ ಬಂದ ಮಹತ್ವದ ಮಸೂದೆ!*

ಪ್ರಗತಿವಾಹಿನಿ ಸುದ್ದಿ: ಅಮೆರಿಕದಲ್ಲಿ ದೀಪಾವಳಿಯನ್ನು ಅಧಿಕೃತ ಫೆಡರಲ್ ರಜಾದಿನವನ್ನಾಗಿ ಘೋಷಿಸಬೇಕೆಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಮೂರು ವರ್ಷಗಳ ಹಿಂದೆ ಮಂಡಿಸಲಾಗಿದ್ದ ‘ದೀಪಾವಳಿ ಕಾಯ್ದೆ’ ವಿಧೇಯಕವನ್ನು ಇದೀಗ 19 ಸಂಸದರ ಬೆಂಬಲದೊಂದಿಗೆ ಮರುಮಂಡಿಸಲಾಗಿದೆ. ಮಸೂದೆ ಅಂಗೀಕಾರವಾದರೆ ಅಮೆರಿಕದ ಲಕ್ಷಾಂತರ ಭಾರತೀಯ ಮೂಲದ ಜನರಿಗೆ ಮಹತ್ವದ ಸಾಂಸ್ಕೃತಿಕ ಮಾನ್ಯತೆ ದೊರೆಯಲಿದೆ.

ಸಂಸದೆ ಗ್ರೇಸ್ ಮೆಂಗ್ ಅವರು 2023ರಲ್ಲಿ ಮೊದಲ ಬಾರಿಗೆ ಈ ವಿಧೇಯಕವನ್ನು ಮಂಡಿಸಿದ್ದರು. ಇದೀಗ ಸಂಸದೆ ಕ್ಯಾರೋಲಿನ್ ಬಿ. ಮಲೋನಿ ಅವರ ನೇತೃತ್ವದಲ್ಲಿ ಮತ್ತೆ ಪ್ರಸ್ತಾಪಿಸಲಾಗಿದೆ. ದೀಪಾವಳಿಯನ್ನು ಅಮೆರಿಕ ಸರ್ಕಾರ ಗುರುತಿಸುವ ಅಧಿಕೃತ ಫೆಡರಲ್ ರಜಾದಿನಗಳ ಪಟ್ಟಿಗೆ ಸೇರಿಸಬೇಕು ಎಂಬುದು ಮಸೂದೆಯ ಪ್ರಮುಖ ಉದ್ದೇಶ.

ಅಮೆರಿಕದಲ್ಲಿ ವಾಸಿಸುತ್ತಿರುವ ಹಿಂದೂ, ಸಿಖ್, ಜೈನ ಮತ್ತು ಬೌದ್ಧ ಸಮುದಾಯಗಳ ಜನರು ದೀಪಾವಳಿಯನ್ನು ಪ್ರಮುಖ ಹಬ್ಬವಾಗಿ ಆಚರಿಸುತ್ತಾರೆ. ಹೀಗಾಗಿ ಈ ಹಬ್ಬಕ್ಕೆ ಅಧಿಕೃತ ರಜೆಯ ಮಾನ್ಯತೆ ನೀಡುವುದರಿಂದ ಅವರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ.

“ದೀಪಾವಳಿ ಅಜ್ಞಾನದ ಮೇಲೆ ಜ್ಞಾನ ಮತ್ತು ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಸಾರುತ್ತದೆ. ದಕ್ಷಿಣ ಏಷ್ಯಾ ಸಮುದಾಯಗಳ ವಿರುದ್ಧ ದ್ವೇಷ ಹೆಚ್ಚುತ್ತಿರುವ ಸಂದರ್ಭದಲ್ಲಿ, ದೀಪಾವಳಿಯನ್ನು ಫೆಡರಲ್ ರಜಾದಿನವಾಗಿ ಗುರುತಿಸುವುದು ಈ ಸಮುದಾಯಗಳು ಅಮೆರಿಕದ ಸಮಾಜದ ಮೌಲ್ಯಯುತ ಭಾಗ ಎಂಬ ಸಂದೇಶ ನೀಡುತ್ತದೆ” ಎಂದು ಕ್ಯಾರೋಲಿನ್ ಬಿ. ಮಲೋನಿ ಹೇಳಿದ್ದಾರೆ.

ಈ ಮಸೂದೆಗೆ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳ ಸಂಸದರಿಂದ ಬೆಂಬಲ ವ್ಯಕ್ತವಾಗಿದೆ. 2023ರಲ್ಲಿ ಮೊದಲ ಬಾರಿಗೆ ಮಂಡನೆಯಾದಾಗ 13 ಸಂಸದರು ಬೆಂಬಲ ಸೂಚಿಸಿದ್ದರು. ಬಳಿಕ ಬೆಂಬಲಿಗರ ಸಂಖ್ಯೆ 16ಕ್ಕೆ ಏರಿತ್ತು. ಆದರೆ ಸಮಿತಿಯ ಹಂತದಲ್ಲೇ ಮಸೂದೆ ಮುಂದುವರಿಯದೆ ಮತದಾನಕ್ಕೆ ಬಂದಿರಲಿಲ್ಲ. ಇದೀಗ 19 ಸಂಸದರ ಬೆಂಬಲದೊಂದಿಗೆ ಮತ್ತೆ ಮಂಡನೆಯಾಗಿರುವುದು ಗಮನ ಸೆಳೆದಿದೆ.

ಮಸೂದೆ ಅಮೆರಿಕದ ಸಂಸತ್ತಿನಲ್ಲಿ ಅಂಗೀಕಾರಗೊಂಡು ಅಧ್ಯಕ್ಷರ ಅಂಕಿತ ಪಡೆದರೆ, ದೀಪಾವಳಿ ದೇಶದ 12ನೇ ಅಧಿಕೃತ ಫೆಡರಲ್ ರಜಾದಿನವಾಗಲಿದೆ. ಇದರಿಂದ ಫೆಡರಲ್ ಸರ್ಕಾರಿ ಉದ್ಯೋಗಿಗಳಿಗೆ ವೇತನ ಸಹಿತ ರಜೆ ದೊರೆಯಲಿದೆ.

ಆದರೆ ಮಸೂದೆ ಮರುಮಂಡನೆಯಾಗಿರುವುದಷ್ಟೇ ಸದ್ಯದ ಬೆಳವಣಿಗೆ. ಅದು ಅಂಗೀಕಾರಗೊಂಡು ಕಾನೂನಾಗುವವರೆಗೆ ಅಮೆರಿಕದಲ್ಲಿ ದೀಪಾವಳಿಗೆ ಅಧಿಕೃತ ಫೆಡರಲ್ ರಜೆ ಜಾರಿಯಾಗುವುದಿಲ್ಲ. ಹೀಗಾಗಿ ಭಾರತೀಯ ಸಮುದಾಯದ ನಿರೀಕ್ಷೆ ಈಗ ಅಮೆರಿಕದ ಕಾಂಗ್ರೆಸ್‌ನ ಮುಂದಿನ ನಿರ್ಧಾರದ ಮೇಲಿದೆ.

Related Articles

Back to top button