Film & EntertainmentKannada NewsKarnataka NewsLatest

*ಮೂರು ಮದುವೆಗಳ ವಿಚಾರ ಮತ್ತೆ ಚರ್ಚೆಯಲ್ಲಿ*: *ಪವನ್ ಕಲ್ಯಾಣ್ ಹಳೆಯ ಹೇಳಿಕೆ ವೈರಲ್*

ಪ್ರಗತಿವಾಹಿನಿ ಸುದ್ದಿ: ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನ ಮತ್ತೆ ಸುದ್ದಿಯಲ್ಲಿದೆ. ಮೂರನೇ ಪತ್ನಿ ಅನ್ನಾ ಲೆಜ್ನೆವಾ ಅವರಿಂದ ಪ್ರತ್ಯೇಕಗೊಳ್ಳುತ್ತಿರುವುದಾಗಿ ದಂಪತಿ ಜಂಟಿ ಹೇಳಿಕೆಯಲ್ಲಿ ಘೋಷಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಪವನ್ ಕಲ್ಯಾಣ್ ಅವರ ಹಳೆಯ ಸಂದರ್ಶನವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ.

ಹಿಂದೆ ನಡೆದಿದ್ದ ಚಾಟ್ ಶೋ ಒಂದರಲ್ಲಿ ಮಾತನಾಡಿದ್ದ ಪವನ್ ಕಲ್ಯಾಣ್, ತಮಗೆ ಬ್ರಹ್ಮಚಾರಿಯಾಗಿ ಉಳಿಯುವ ಆಸೆಯಿತ್ತು. ಯೋಗದ ಮಾರ್ಗದಲ್ಲಿ ಸಾಗಲು ಬಯಸಿದ್ದ ತಮ್ಮ ಜೀವನದಲ್ಲಿ ಇಂತಹ ಘಟನೆಗಳು ನಡೆಯುತ್ತವೆ ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದರು. ಈ ಹೇಳಿಕೆ ಇದೀಗ ಮತ್ತೆ ಚರ್ಚೆಗೆ ಬಂದಿದೆ.

ಮೂರು ಮದುವೆಗಳ ವಿಚಾರವಾಗಿ ವ್ಯಕ್ತವಾಗಿದ್ದ ಟೀಕೆಗಳಿಗೂ ಪವನ್ ಈ ಹಿಂದೆ ಉತ್ತರಿಸಿದ್ದರು. ತಾವು ಒಂದೇ ಸಮಯದಲ್ಲಿ ಮೂವರನ್ನು ಮದುವೆಯಾಗಿಲ್ಲ. ಒಂದು ಸಂಬಂಧ ಸರಿಯಾಗಿ ಮುಂದುವರಿಯದ ಸಂದರ್ಭದಲ್ಲಿ ಮತ್ತೊಂದು ಮದುವೆಯ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದರು.

ಪವನ್ ಕಲ್ಯಾಣ್ ಅವರ ಮೊದಲ ಮದುವೆ 1997ರಲ್ಲಿ ನಂದಿನಿ ಅವರೊಂದಿಗೆ ನಡೆದಿತ್ತು. ಆ ಸಂಬಂಧ ಮುರಿದುಬಿದ್ದ ಬಳಿಕ 2009ರಲ್ಲಿ ನಟಿ ರೇಣು ದೇಸಾಯಿ ಅವರನ್ನು ವಿವಾಹವಾಗಿದ್ದರು. ನಂತರ 2012ರಲ್ಲಿ ಅವರಿಂದ ವಿಚ್ಛೇದನ ಪಡೆದ ಪವನ್, 2013ರಲ್ಲಿ ರಷ್ಯಾ ಮೂಲದ ಅನ್ನಾ ಲೆಜ್ನೆವಾ ಅವರನ್ನು ಮದುವೆಯಾಗಿದ್ದರು.

ಇತ್ತ ಪವನ್ ಅವರ ಎರಡನೇ ಪತ್ನಿ ರೇಣು ದೇಸಾಯಿ ಕೂಡ ಇತ್ತೀಚೆಗೆ ತಮ್ಮ ವಿಚ್ಛೇದನದ ವಿಚಾರವಾಗಿ ಬೇಸರ ವ್ಯಕ್ತಪಡಿಸಿದ್ದರು. ವಿಚ್ಛೇದನವಾಗಿ ಹಲವು ವರ್ಷಗಳಾದರೂ ಜನರು ಇಂದಿಗೂ ಅದೇ ವಿಚಾರಕ್ಕೆ ತಮ್ಮನ್ನು ಟೀಕಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು. ಶ್ರೀರಾಮನ ವನವಾಸ 14 ವರ್ಷಕ್ಕೆ ಮುಗಿದಿತ್ತು, ಆದರೆ ತಮ್ಮ ವನವಾಸ ಯಾವಾಗ ಮುಗಿಯುತ್ತದೋ ಎಂದು ಭಾವುಕರಾಗಿ ಮಾತನಾಡಿದ್ದರು.

ಒಟ್ಟಿನಲ್ಲಿ, ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನದ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಅವರ ಹಳೆಯ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿವೆ.

Related Articles

Back to top button