Kannada NewsKarnataka NewsLatest

*ಹಾಸನಾಂಬೆ ದರ್ಶನೋತ್ಸವ ಅಂತ್ಯ*: *ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲು ಮುಚ್ಚಿದ ಅರ್ಚಕರು*

ಪ್ರಗತಿವಾಹಿನಿ ಸುದ್ದಿ: 11 ದಿನಗಳ ಕಾಲ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದ್ದ ಹಾಸನಾಂಬೆ ದೇವಿಗೆ ಇದೀಗ ವಿದಾಯ ಹೇಳಲಾಗಿದೆ. ವಿಶೇಷ ಪೂಜೆ, ವಿಧಿವಿಧಾನಗಳ ಬಳಿಕ ಗರ್ಭಗುಡಿ ಬಾಗಿಲು ಮುಚ್ಚಲಾಗಿದೆ. ಈ ಬಾರಿಯ ಜಾತ್ರಾ ಮಹೋತ್ಸವ ಹಲವು ದಾಖಲೆಗಳೊಂದಿಗೆ ಸಂಪನ್ನಗೊಂಡಿದೆ.

ನವೆಂಬರ್ 11ರಂದು ಮಧ್ಯಾಹ್ನ ಶಾಸ್ತ್ರೋಕ್ತವಾಗಿ ಹಾಸನಾಂಬೆ ದೇವಿಯ ಗರ್ಭಗುಡಿ ಬಾಗಿಲು ಮುಚ್ಚಲಾಯಿತು. ಮಧ್ಯಾಹ್ನ 12ರಿಂದ 1.30ರವರೆಗೆ ರಾಹುಕಾಲವಿದ್ದ ಹಿನ್ನೆಲೆಯಲ್ಲಿ ಈ ಬಾರಿ ಬಾಗಿಲು ಮುಚ್ಚುವ ಕಾರ್ಯ ತಡವಾಗಿ ನಡೆಯಿತು. ಬಾಗಿಲು ಮುಚ್ಚುವ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದೇವಿಯ ದರ್ಶನ ಪಡೆದರು.

ಬಳಿಕ ಅರ್ಚಕರು ದೇವಿಗೆ ಮಾಡಿದ್ದ ಅಲಂಕಾರವನ್ನು ತೆರವುಗೊಳಿಸಿ, ಒಡವೆಗಳನ್ನು ತೆಗೆದು ಅಲಂಕಾರ ವಿಸರ್ಜನೆ ಪೂಜೆ ನೆರವೇರಿಸಿದರು. ನಂತರ ದೀಪಕ್ಕೆ ಎಣ್ಣೆ ಹಾಕಿ ಗರ್ಭಗುಡಿ ಬಾಗಿಲಿಗೆ ಶಾಸ್ತ್ರೋಕ್ತವಾಗಿ ಬೀಗ ಹಾಕಲಾಯಿತು. ಪ್ರಧಾನ ಅರ್ಚಕ ನಾಗರಾಜ್ ಅವರು ಬಾಗಿಲಿಗೆ ಮುದ್ರೆ ಒತ್ತಿದರು.

ಈ ಬಾರಿಯ ಹಾಸನಾಂಬೆ ಹಾಗೂ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ನಡೆಯಿತು. ಅಕ್ಟೋಬರ್ 30ರಿಂದ ನವೆಂಬರ್ 11ರ ಬೆಳಗ್ಗೆ 6 ಗಂಟೆಯವರೆಗೆ 30 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ವಿಶೇಷ ದರ್ಶನದ 1,000 ಮತ್ತು 300 ರೂಪಾಯಿ ಟಿಕೆಟ್ ಮಾರಾಟ ಹಾಗೂ ಲಾಡು ಮಾರಾಟದಿಂದ ಒಟ್ಟು 25.36 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.

ಇನ್ನು ಯಾವುದೇ ಗೊಂದಲ ಅಥವಾ ನೂಕುನುಗ್ಗಲು ಇಲ್ಲದೆ ಜಾತ್ರೆ ಯಶಸ್ವಿಯಾಗಿ ನಡೆದರೆ ಈಡುಗಾಯಿ ಒಡೆಯುವುದಾಗಿ ಶಾಂತಿಗ್ರಾಮ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಎಸ್ಪಿ ಶುಭನ್ವಿತಾ ಅವರೊಂದಿಗೆ ಡಿವೈಎಸ್ಪಿ, ಸಿಪಿಐ ಹಾಗೂ ಪಿಎಸ್ಐಗಳು ದೇವಾಲಯದ ಎದುರು ಈಡುಗಾಯಿ ಒಡೆದು ಹರಕೆ ತೀರಿಸಿದರು. ಜಾತ್ರೆಯ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಎಸ್ಪಿ ಧನ್ಯವಾದ ತಿಳಿಸಿದರು.

ಹಾಸನಾಂಬೆ ಭಕ್ತರು ಈಗ ಮುಂದಿನ ವರ್ಷದ ದರ್ಶನಕ್ಕಾಗಿ ಕಾಯಬೇಕಿದೆ. ಮುಂದಿನ ವರ್ಷದ ಜಾತ್ರಾ ಮಹೋತ್ಸವ ಅಕ್ಟೋಬರ್ 21ರಿಂದ 31ರವರೆಗೆ ನಡೆಯಲಿದೆ.

Related Articles

Back to top button