Kannada NewsKarnataka NewsLatest

*ಚೆಕ್‌ಪೋಸ್ಟ್‌ನಲ್ಲೇ ಸಿಆರ್‌ಪಿಎಫ್ ಸಿಬ್ಬಂದಿಗೆ ಗುಂಡಿನ ದಾಳಿ*: *ಮೂವರಿಗೆ ಗಾಯ*

ಪ್ರಗತಿವಾಹಿನಿ ಸುದ್ದಿ: ಭದ್ರತಾ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಿಂದ ಮೂವರು ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿ ನಡೆಸಿದ ಬಳಿಕ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಪರಾರಿಯಾಗಿದ್ದು, ಭದ್ರತಾ ಪಡೆಗಳು ತೀವ್ರ ಶೋಧ ಆರಂಭಿಸಿವೆ.

ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮಿರ್ ಬಜಾರ್ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಸುಮಾರು 2.15ರ ವೇಳೆಗೆ ಈ ಘಟನೆ ನಡೆದಿದೆ. ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಬೈಕ್‌ನಲ್ಲಿ ಬಂದ ಅಪರಿಚಿತರು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಸಿಆರ್‌ಪಿಎಫ್ ತಿಳಿಸಿದೆ.

ದಾಳಿಯಲ್ಲಿ ರಾಕೇಶ್ ದಾಸ್, ಸಂತೋಷ್ ಚಂದ್ರು ಮತ್ತು ಸೋಮ್‌ವೀರ್ ಸಿಂಗ್ ಗಾಯಗೊಂಡಿದ್ದಾರೆ. ರಾಕೇಶ್ ದಾಸ್ ಅವರ ಎಡಗಾಲಿಗೆ ಗುಂಡೇಟು ತಗುಲಿದ್ದು, ಸಂತೋಷ್ ಚಂದ್ರು ಅವರ ಹೊಟ್ಟೆ ಮತ್ತು ಬೆನ್ನಿನ ಭಾಗಕ್ಕೆ ಗಾಯಗಳಾಗಿವೆ. ಸೋಮ್‌ವೀರ್ ಸಿಂಗ್ ಅವರ ಎಡಗೈಗೆ ಗಾಯವಾಗಿದೆ. ಗಾಯಾಳುಗಳನ್ನು ಅನಂತನಾಗ್ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಸ್ಥಿತಿಯೂ ಸ್ಥಿರವಾಗಿದೆ. ಯಾವುದೇ ಪ್ರಾಣಾಪಾಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಕೋರರಿಗಾಗಿ ಬೃಹತ್ ಶೋಧ

ಘಟನೆ ನಡೆದ ತಕ್ಷಣ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದಿವೆ. ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿ, ಸುತ್ತಮುತ್ತ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಶಸ್ತ್ರಸಜ್ಜಿತ ವಾಹನಗಳೊಂದಿಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಸ್ಥಳೀಯರು ಮನೆಗಳಿಂದ ಹೊರಬರದಂತೆ ಧ್ವನಿವರ್ಧಕಗಳ ಮೂಲಕ ಸೂಚನೆ ನೀಡಲಾಗಿದೆ.

ಇದೇ ವೇಳೆ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ದಾಳಿ ನಡೆದ ಸಂದರ್ಭದಲ್ಲಿ ಕುಲ್ಗಾಮ್ ಜಿಲ್ಲೆಯಲ್ಲೇ ಇದ್ದರು. ಆದರೆ ಘಟನೆ ನಡೆದ ಸ್ಥಳದ ಸಮೀಪದಲ್ಲಿ ಇರಲಿಲ್ಲ. ಸರ್ಕಾರಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಮೂರು ದಿನಗಳ ‘ವೆಶೋ ಉತ್ಸವ’ದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಅವರು ಆಗಮಿಸಿದ್ದರು.

ಇನ್ನು ಕಳೆದ ತಿಂಗಳು ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲೂ ಐಇಡಿ ಸ್ಫೋಟದಲ್ಲಿ ನಾಲ್ವರು ಸಿಆರ್‌ಪಿಎಫ್ ಅಧಿಕಾರಿಗಳು ಗಾಯಗೊಂಡಿದ್ದರು. ಇದೀಗ ಕುಲ್ಗಾಮ್‌ನಲ್ಲಿ ನಡೆದ ಗುಂಡಿನ ದಾಳಿ ಭದ್ರತಾ ಪಡೆಗಳಲ್ಲಿ ಎಚ್ಚರಿಕೆ ಹೆಚ್ಚಿಸಿದೆ.

Related Articles

Back to top button