Belagavi NewsBelgaum NewsKannada NewsKarnataka NewsNationalPolitics

*ರಸ್ತೆ ಗುಂಡಿ ಮುಚ್ಚದಿದ್ದರೆ ಸಚಿವರು ಸಂಚರಿಸುವ ರಸ್ತೆಗಳಲ್ಲಿ ಗಿಡ ನೆಡುವೆ*: *ಅಭಯ ಪಾಟೀಲ್ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವುದಾದರೆ ಉತ್ತರ ಕರ್ನಾಟಕ ಹಾಗೂ ಬೆಳಗಾವಿ ಜಿಲ್ಲೆಯ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆಯಾಗಬೇಕು. ಕೇವಲ ಕಾಟಾಚಾರಕ್ಕೆ ಅಧಿವೇಶನ ನಡೆಸಿ, ಈ ಭಾಗದ ಜನರಿಗೆ ಮೋಸ ಮಾಡುವ ಕೆಲಸವನ್ನು ಸರ್ಕಾರ ಕೈಬಿಡಬೇಕು ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿ ನಗರ, ಜಿಲ್ಲೆ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಹತ್ತಾರು ಸಮಸ್ಯೆಗಳಿವೆ. ಆಯಾ ಭಾಗದ ಶಾಸಕರಿಗೆ ತಮ್ಮ ಕ್ಷೇತ್ರಗಳ ಸಮಸ್ಯೆಗಳನ್ನು ಸದನದಲ್ಲಿ ಮಂಡಿಸಲು ಸೂಕ್ತ ಅವಕಾಶ ನೀಡಬೇಕು. ಒಂದೇ ವಿಷಯದ ಕುರಿತು ನಾಲ್ಕು ದಿನಗಳ ಕಾಲ ಚರ್ಚೆ ನಡೆಸಿ ಕಲಾಪದ ಸಮಯ ವ್ಯರ್ಥ ಮಾಡಬಾರದು. ವಿಧಾನಸಭಾಧ್ಯಕ್ಷರು ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಅಧಿವೇಶನದ ಮೊದಲ ದಿನ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಚರ್ಚಿಸುವುದಾಗಿ ಹೇಳಲಾಗುತ್ತದೆ. ಆದರೆ, ಉಳಿದ ದಿನಗಳಲ್ಲಿ ದಕ್ಷಿಣ ಕರ್ನಾಟಕದ ವಿಷಯಗಳೇ ಹೆಚ್ಚಾಗಿ ಚರ್ಚೆಯಾಗುತ್ತವೆ. ದಕ್ಷಿಣ ಕರ್ನಾಟಕದ ಶಾಸಕರು ಕೂಡ ಪೂರ್ಣ ಪ್ರಮಾಣದಲ್ಲಿ ಅಧಿವೇಶನದಲ್ಲಿ ಭಾಗವಹಿಸಬೇಕು. ಈ ಬಾರಿ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಆದ್ಯತೆ ಸಿಗಬೇಕು ಎಂದು ಹೇಳಿದರು.

ಬೆಳಗಾವಿ ಅಭಿವೃದ್ಧಿಗೆ ಮೂರು ವರ್ಷಗಳಿಂದ ಅನುದಾನವಿಲ್ಲ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿವರ್ಷ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿ ನಗರದ ಅಭಿವೃದ್ಧಿಗೆ ₹15ರಿಂದ ₹20 ಕೋಟಿ ಅನುದಾನ ಬಿಡುಗಡೆಯಾಗುತ್ತಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ಯಾವುದೇ ವಿಶೇಷ ಅನುದಾನ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು.

ನಗರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಪಡಿಸುವಂತೆ ಗಣೇಶೋತ್ಸವದ ಸಂದರ್ಭದಲ್ಲಿಯೇ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂದಿನ ಎಂಟು ದಿನಗಳೊಳಗೆ ರಸ್ತೆ ಗುಂಡಿಗಳನ್ನು ಮುಚ್ಚದಿದ್ದರೆ, ಸಚಿವರು ಸಂಚರಿಸುವ ರಸ್ತೆಗಳಲ್ಲಿ ದೊಡ್ಡ ಗುಂಡಿಗಳನ್ನು ತೋಡಿ ಗಿಡಗಳನ್ನು ನೆಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರು ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಮಾತ್ರ ಪ್ಯಾಚ್‌ವರ್ಕ್ ಮಾಡಿಸುತ್ತಿದ್ದು, ದಕ್ಷಿಣ ಕ್ಷೇತ್ರದ ರಸ್ತೆಗಳ ಸಮಸ್ಯೆ ಅವರ ಗಮನಕ್ಕೆ ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಲ್‌ಆಂಡ್‌ಟಿ ವಿರುದ್ಧ ಚೆನ್ನೈನಲ್ಲಿ ಧರಣಿ ಎಚ್ಚರಿಕೆ

ಎಲ್‌ಆಂಡ್‌ಟಿ ಕಂಪನಿಯವರು ನಗರದ ಹಲವೆಡೆ ರಸ್ತೆಗಳನ್ನು ಅಗೆದು ಹಾಗೆಯೇ ಬಿಟ್ಟಿದ್ದಾರೆ. ಮೊದಲಿನ ಸ್ಥಿತಿಗೆ ರಸ್ತೆಗಳನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿ ಕಂಪನಿಯ ಸಿಬ್ಬಂದಿಯನ್ನು ಎಂಟು ಕೊಠಡಿಗಳಲ್ಲಿ ಕೂಡಿ ಹಾಕುವ ಹೋರಾಟ ನಡೆಸಿದ್ದರೂ ರಸ್ತೆ ಸುಧಾರಣೆಯಾಗಿಲ್ಲ ಎಂದು ದೂರಿದರು.

ಅಧಿವೇಶನದ ಒಳಗಾಗಿ ಅಥವಾ ಅಧಿವೇಶನ ಮುಗಿದ ಬಳಿಕವಾದರೂ ಕಂಪನಿಯವರು ತಮ್ಮ ತಪ್ಪುಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಮೇಯರ್ ಹಾಗೂ ನಗರಸೇವಕರೊಂದಿಗೆ ಚೆನ್ನೈನಲ್ಲಿರುವ ಎಲ್‌ಆಂಡ್‌ಟಿ ಮುಖ್ಯ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

ಅಂತರರಾಷ್ಟ್ರೀಯ ಕಂಪನಿ ಎಂದು ಹೇಳಿಕೊಳ್ಳುವ ಎಲ್‌ಆಂಡ್‌ಟಿ, ಬೆಳಗಾವಿಯಲ್ಲಿ ಅತ್ಯಂತ ಕಳಪೆ ಕಾಮಗಾರಿ ನಡೆಸುತ್ತಿದೆ. ಸ್ಥಳೀಯ ಗುತ್ತಿಗೆದಾರರಿಗಿಂತಲೂ ಕಳಪೆ ಗುಣಮಟ್ಟದ ಕೆಲಸ ಮಾಡುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

120 ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ

ತಮ್ಮ ಕ್ಷೇತ್ರದ ದೇವಸ್ಥಾನಗಳ ಅಭಿವೃದ್ಧಿಗಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ₹20 ಕೋಟಿ ಅನುದಾನ ಮಂಜೂರಾಗಿತ್ತು. ಇದರಲ್ಲಿ ₹5 ಕೋಟಿ ಮಾತ್ರ ಬಿಡುಗಡೆಯಾಗಿದ್ದು, ಉಳಿದ ಹಣ ಬಿಡುಗಡೆಯಾಗದ ಕಾರಣ ಸುಮಾರು 50 ಸಮಾಜಗಳ ವ್ಯಾಪ್ತಿಯ 120 ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ ಎಂದು ಹೇಳಿದರು.

ಈ ಕುರಿತು ಇತ್ತೀಚೆಗೆ ಸಮಾಜದ ಮುಖಂಡರ ಸಭೆ ನಡೆಸಿದಾಗ, ಅಧಿವೇಶನ ಆರಂಭವಾಗುವ ಮುನ್ನ ಅನುದಾನ ಬಿಡುಗಡೆ ಮಾಡದಿದ್ದರೆ ಅಧಿವೇಶನಕ್ಕೆ ಆಗಮಿಸುವ ಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಮಹಿಳೆಯರು ಎಚ್ಚರಿಸಿದ್ದಾರೆ. ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ. ಇಲ್ಲದಿದ್ದರೆ ಮಹಿಳೆಯರ ಹೋರಾಟಕ್ಕೆ ನಾವೂ ಬೆಂಬಲ ನೀಡಬೇಕಾಗುತ್ತದೆ ಎಂದರು.

ಕನಿಷ್ಠ ₹50 ಕೋಟಿ ಅನುದಾನಕ್ಕೆ ಬೇಡಿಕೆ

ಕಾಂಗ್ರೆಸ್ ಶಾಸಕರಿಗೆ ₹100 ಕೋಟಿ ಅನುದಾನ ನೀಡುವುದಾದರೆ, ಪ್ರತಿಪಕ್ಷದ ಶಾಸಕರ ಕ್ಷೇತ್ರಗಳಿಗೂ ಕನಿಷ್ಠ ₹50 ಕೋಟಿ ನೀಡಬೇಕು ಎಂಬುದು ನಮ್ಮ ಬೇಡಿಕೆ. ಅನುದಾನ ಕೇಳುವುದು ನಮ್ಮ ಹಕ್ಕು. ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಯಾಗದ ಕಾರಣ ಕೇಂದ್ರ ಸರ್ಕಾರದ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿಸುತ್ತಿದ್ದೇವೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಮಹಾನಗರ ಪಾಲಿಕೆಗೆ ₹100 ಕೋಟಿ ಅನುದಾನ ನೀಡಲಾಗುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪ್ರತಿ ಮಹಾನಗರ ಪಾಲಿಕೆಗೆ ₹100 ಕೋಟಿ ನೀಡುವುದಾಗಿ ಘೋಷಿಸಿದ್ದರು. ಆದರೆ, ಮೂರೂವರೆ ವರ್ಷ ಕಳೆದರೂ ಆ ಅನುದಾನ ಬೆಳಗಾವಿಗೆ ತಲುಪಿಲ್ಲ ಎಂದು ಆರೋಪಿಸಿದರು.

ತಾವು ಮೊದಲ ಬಾರಿ ಶಾಸಕರಾಗಿದ್ದ ಸಂದರ್ಭದಲ್ಲಿ ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದರು. ಆಗಿನ ಸರ್ಕಾರವನ್ನು ಹಲವರು ದುರ್ಬಲ ಸರ್ಕಾರ ಎಂದು ಕರೆಯುತ್ತಿದ್ದರು. ಆದರೆ, ಈಗಿನ ಸರ್ಕಾರಕ್ಕಿಂತ ನೂರು ಪಟ್ಟು ಉತ್ತಮವಾಗಿತ್ತು ಎಂದು ಅಭಯ್ ಪಾಟೀಲ್ ಅಭಿಪ್ರಾಯಪಟ್ಟರು.

‘ವಿಜನ್ 2050’ ಮೂಲಕ ಬೆಳಗಾವಿ ಅಭಿವೃದ್ಧಿಗೆ ರೂಪುರೇಷೆ

ಬೆಳಗಾವಿಯ 20 ಪ್ರಮುಖರ ನಿಯೋಗದೊಂದಿಗೆ ದೆಹಲಿಗೆ ತೆರಳಲು ನಿರ್ಧರಿಸಲಾಗಿದೆ. ಕೇಂದ್ರ ಗೃಹ, ರಕ್ಷಣಾ, ಹಣಕಾಸು ಸೇರಿದಂತೆ ವಿವಿಧ ಇಲಾಖೆಗಳ ಸಚಿವರನ್ನು ಭೇಟಿಯಾಗಲು ಸಮಯ ಕೋರಲಾಗಿದೆ ಎಂದು ಹೇಳಿದರು.

ಮುಂದಿನ ವಾರ ‘ವಿಜನ್ 2050’ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ವಿವಿಧ ಸಂಘಟನೆಗಳು, ಜಿಲ್ಲಾಡಳಿತ ಹಾಗೂ ಸಾರ್ವಜನಿಕರನ್ನು ಆಹ್ವಾನಿಸಲಾಗುತ್ತದೆ. ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಕೈಗೊಳ್ಳಬೇಕಾದ ಯೋಜನೆಗಳ ಕುರಿತು ಚರ್ಚಿಸಿ ಪಟ್ಟಿ ಸಿದ್ಧಪಡಿಸಲಾಗುವುದು. ಬಳಿಕ ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ಅಭಯ್ ಪಾಟೀಲ್ ತಿಳಿಸಿದರು.

Related Articles

Back to top button