*ಎನ್ವಿಡಿಯಾ ಸಿಇಒ ಸುತ್ತ ಹೊಸ ವಿವಾದ*: *ಕಂಪನಿ ಉಪಾಧ್ಯಕ್ಷೆ ಜೊತೆಗೇ 2ನೇ ಅಕ್ರಮ ಸಂಬಂಧ*

ಪ್ರಗತಿವಾಹಿನಿ ಸುದ್ದಿ: ವಿಶ್ವದ ಪ್ರಮುಖ ಚಿಪ್ ತಯಾರಿಕಾ ಕಂಪನಿ ಎನ್ವಿಡಿಯಾದ ಸಿಇಒ ಜೆನ್ಸನ್ ಹುವಾಂಗ್ ಸುತ್ತ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಈಗಾಗಲೇ ವೈಯಕ್ತಿಕ ಸಂಬಂಧದ ಆರೋಪ ಎದುರಿಸುತ್ತಿರುವ ಜೆನ್ಸನ್ ವಿರುದ್ಧ ಮತ್ತೊಬ್ಬ ಮಹಿಳೆಯೊಂದಿಗಿನ ಆತ್ಮೀಯ ಸಂಬಂಧದ ಕುರಿತು ಹೊಸ ಆರೋಪ ಕೇಳಿಬಂದಿದೆ. ಅಮೆರಿಕದ ಮಾಧ್ಯಮವೊಂದು ಪ್ರಕಟಿಸಿರುವ ವರದಿ ತಂತ್ರಜ್ಞಾನ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಚೀನಾದ ಮಹಿಳೆ ಆಲಿಸ್ ಹುವಾಂಗ್ ಅವರೊಂದಿಗಿನ ವಿವಾದದ ಬೆನ್ನಲ್ಲೇ, ಎನ್ವಿಡಿಯಾದ ಆರೋಗ್ಯ ವಿಭಾಗದ ಉಪಾಧ್ಯಕ್ಷೆ ಕಿಂಬರ್ಲಿ ಪೊವೆಲ್ ಅವರೊಂದಿಗೂ ಜೆನ್ಸನ್ ಹುವಾಂಗ್ ವಿವಾಹೇತರ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ. ಕಂಪನಿಯ ಐವರು ಮಾಜಿ ಉದ್ಯೋಗಿಗಳ ಮಾಹಿತಿಯನ್ನು ಆಧರಿಸಿ ಅಮೆರಿಕದ ಮಾಧ್ಯಮ ಈ ವರದಿ ಪ್ರಕಟಿಸಿದೆ.
ವರದಿಯ ಪ್ರಕಾರ, ಕಳೆದ ಮಾರ್ಚ್ನಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ನಲ್ಲಿ ನಡೆದ ಎನ್ವಿಡಿಯಾದ ವಾರ್ಷಿಕ ಜಿಟಿಸಿ ಡೆವಲಪರ್ ಸಮ್ಮೇಳನದ ಸಂದರ್ಭದಲ್ಲಿ ಹೋಟೆಲ್ವೊಂದರಲ್ಲಿ ಜೆನ್ಸನ್ ಹುವಾಂಗ್ ಮತ್ತು ಕಿಂಬರ್ಲಿ ಪೊವೆಲ್ ಆತ್ಮೀಯವಾಗಿ ಇರುವುದು ಕಂಡುಬಂದಿತ್ತು. ಈ ದೃಶ್ಯವನ್ನು ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದರು ಎಂದು ಮಾಜಿ ಉದ್ಯೋಗಿಗಳು ತಿಳಿಸಿದ್ದಾರೆ.
ಈ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಯನ್ನು ಜೆನ್ಸನ್ ಹುವಾಂಗ್ ಅವರ ಭದ್ರತಾ ಸಿಬ್ಬಂದಿ ಗಮನಿಸಿ, ಬಳಿಕ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ಗೌಪ್ಯತಾ ಒಪ್ಪಂದಕ್ಕೆ (ಎನ್ಡಿಎ) ಸಹಿ ಹಾಕುವಂತೆ ಸೂಚಿಸಿದ್ದರು ಎಂಬ ಆರೋಪವೂ ವರದಿಯಲ್ಲಿದೆ. ಈ ಘಟನೆಯ ಬಳಿಕ ಕಂಪನಿಯ ಉದ್ಯೋಗಿಗಳ ವಲಯದಲ್ಲಿ ಇಬ್ಬರ ನಡುವಿನ ಸಂಬಂಧದ ಕುರಿತು ಚರ್ಚೆಗಳು ನಡೆದಿದ್ದವು ಎಂದು ವರದಿ ಉಲ್ಲೇಖಿಸಿದೆ.
ಈ ಆರೋಪಗಳು ಎನ್ವಿಡಿಯಾದ ಆಂತರಿಕ ಉದ್ಯೋಗ ನೀತಿಗಳ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಕಂಪನಿಯ ನೀತಿ ಸಂಹಿತೆಯ ಪ್ರಕಾರ, ಉದ್ಯೋಗಿಗಳು ವೈಯಕ್ತಿಕ ಸಂಬಂಧಗಳಿಂದ ಹಿತಾಸಕ್ತಿ ಸಂಘರ್ಷ ಉಂಟಾಗುವ ಪರಿಸ್ಥಿತಿಗಳನ್ನು ತಪ್ಪಿಸಬೇಕು. ದುರ್ನಡತೆಯ ಆರೋಪಗಳು ಕೇಳಿಬಂದರೆ ಸೂಕ್ತ ತನಿಖೆ ನಡೆಸುವ ನಿಯಮಗಳೂ ಇವೆ.
ಈ ಕುರಿತು ಮಾಧ್ಯಮಗಳು ಜೆನ್ಸನ್ ಹುವಾಂಗ್ ಅವರನ್ನು ಪ್ರಶ್ನಿಸಿದಾಗ, ನೇರವಾಗಿ ತಮ್ಮೊಂದಿಗೆ ಮಾತನಾಡಬಾರದು ಎಂದು ಹೇಳಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇನ್ನು ಕಿಂಬರ್ಲಿ ಪೊವೆಲ್ ಅವರು 2008ರಿಂದ ಎನ್ವಿಡಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಆರೋಗ್ಯ ಕ್ಷೇತ್ರದ ಉಪಾಧ್ಯಕ್ಷೆಯಾಗಿರುವ ಅವರು, ವೈದ್ಯಕೀಯ ಇಮೇಜಿಂಗ್ ಸೇರಿದಂತೆ ಆರೋಗ್ಯ ಸೇವೆ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆಯನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಹೊಂದಿದ್ದಾರೆ.
2016ರಲ್ಲಿ ಎಐ ವ್ಯವಹಾರ ಅಭಿವೃದ್ಧಿ ವಿಭಾಗದ ಹಿರಿಯ ನಿರ್ದೇಶಕಿಯಾಗಿ ನೇಮಕಗೊಂಡಿದ್ದ ಅವರು, 2017ರ ಕೊನೆಯಲ್ಲಿ ಆರೋಗ್ಯ ವಿಭಾಗದ ಉಪಾಧ್ಯಕ್ಷೆಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಕಳೆದ ಮಾರ್ಚ್ನಲ್ಲಿ ನಡೆದ ಜಿಟಿಸಿ ಸಮ್ಮೇಳನದಲ್ಲಿಯೂ ಆರೋಗ್ಯ ಸೇವೆ ಮತ್ತು ಜೈವಿಕ ಸಂಶೋಧನೆಯಲ್ಲಿ ಎಐ ತಂತ್ರಜ್ಞಾನದ ಬಳಕೆಯ ಕುರಿತು ಪ್ರಸ್ತುತಿ ನೀಡಿದ್ದರು.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜೆನ್ಸನ್ ಹುವಾಂಗ್ ಅವರ ವಿರುದ್ಧ ಕಂಪನಿಯ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬಹುದೇ ಎಂಬ ಚರ್ಚೆಯೂ ಆರಂಭವಾಗಿದೆ. ಆದರೆ, ಅವರ ಹುದ್ದೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಕ್ರಮ ಅಥವಾ ನಿರ್ಧಾರ ಪ್ರಕಟವಾಗಿಲ್ಲ.



