*ಸಿಎಂ ವಿಶೇಷ ಕರ್ತವ್ಯಾಧಿಕಾರಿಯಾಗಿ ಭ್ರಷ್ಟಾಚಾರ ಆರೋಪ ಹೊತ್ತಿರುವ ಅಧಿಕಾರಿ ನೇಮಕ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಗಂಭೀರ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಅಧಿಕಾರಿಯೊಬ್ಬರನ್ನ ನೇಮಕ ಮಾಡಲಾಗಿದ್ದು, ಈ ವಿಚಾರ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ತುಮಕೂರು ಜಿಲ್ಲೆಯ ತುರುವೇಕೆರೆ ತಹಶೀಲ್ದಾರ್ ಆಗಿದ್ದ ಕುಂ.ಞಿ ಅಹಮದ್ ನವೆಂಬರ್ 5 ರಂದು ಸಿಎಂ ವಿಶೇಷ ಕರ್ತವ್ಯಾಧಿಕಾರಿಯಾಗಿ ಕರ್ತವ್ಯ ವರದಿ ಮಾಡಿಕೊಂಡಿದ್ದು, ಇವರ ವಿರುದ್ಧ ತಕ್ಷಣವೇ ಕ್ರಮ ಕೈಗೊಂಡು ಹುದ್ದೆಯಿಂದ ವಜಾಗೊಳಿಸುವಂತೆ ಮಂಡ್ಯದ ಸಾಮಾಜಿಕ ಕಾರ್ಯಕರ್ತ ಕೆ.ಆರ್. ರವೀಂದ್ರ ಅವರು ರಾಜ್ಯಪಾಲರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.
ಕುಂ.ಞಿ ಅಹಮದ್ ಅವರು ಈ ಹಿಂದೆ ಮಂಡ್ಯ ಹಾಗೂ ನಾಗಮಂಗಲ ತಾಲೂಕುಗಳಲ್ಲಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹಲವು ಗಂಭೀರ ಅಕ್ರಮಗಳನ್ನ ಎಸಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ನಾಗಮಂಗಲ ತಾಲೂಕಿನಲ್ಲಿ ಪ್ರಕೃತಿ ವಿಕೋಪ ಹಾಗೂ ಕೋವಿಡ್-19 ಪರಿಹಾರಕ್ಕೆ ಮೀಸಲಾಗಿದ್ದ ಸುಮಾರು 3 ಕೋಟಿಗೂ ಅಧಿಕ ಮೊತ್ತದ ಸರ್ಕಾರಿ ಅನುದಾನ ದುರುಪಯೋಗವಾಗಿರುವ ಆರೋಪ.
ಪ್ರಸಿದ್ಧ ಮುಳ್ಳಕಟ್ಟಮ್ಮ ದೇವಸ್ಥಾನದ ಹುಂಡಿ ಹಣ ಹಾಗೂ ಭಕ್ತರಿಂದ ಸಂಗ್ರಹವಾಗಿದ್ದ ಅಕ್ಕಿ, ಬೆಲ್ಲ ಹಾಳಾಗಿದ್ದರೂ ಅದನ್ನು ಎಡೆಯೂರು ಸಿದ್ದಲಿಂಗೇಶ್ವರ ಕ್ಷೇತ್ರಕ್ಕೆ ದಾನವಾಗಿ ನೀಡಿದ ಗಂಭೀರ ಪ್ರಮಾದ.
ಮಂಡ್ಯ ತಾಲೂಕಿನಲ್ಲಿ ಮೃತ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ಖಾತೆ ಬದಲಾವಣೆ ಮಾಡಿರುವ ಭೂ ಹಗರಣ. ಮಂಡ್ಯ ಜಿಲ್ಲಾಧಿಕಾರಿಗಳು ರಚಿಸಿದ್ದ ತನಿಖಾ ಸಮಿತಿಯು ಈ ಆರೋಪಗಳು ಸಾಬೀತಾಗಿವೆ ಎಂದು ವರದಿ ನೀಡಿರುವುದಾಗಿ ಉಲ್ಲೇಖಿಸಲಾಗಿದೆ.
ಭ್ರಷ್ಟಾಚಾರದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಹ್ಮದ್ ಅವರಿಗೆ ತಹಶೀಲ್ದಾರ್ ಹುದ್ದೆಯಿಂದ ಉಪವಿಭಾಗಾಧಿಕಾರಿ ಸ್ಥಾನಕ್ಕೆ ನೀಡಬೇಕಿದ್ದ ಮುಂಬಡ್ತಿಯನ್ನು ತಡೆಹಿಡಿಯಲಾಗಿತ್ತು. ಜೊತೆಗೆ ಇವರ ವಿರುದ್ಧ ನ್ಯಾಯಾಲಯದಿಂದ ಜಾಮೀನು ರಹಿತ ಬಂಧನ ವಾರಂಟ್ ಕೂಡ ಜಾರಿಯಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.
ಭ್ರಷ್ಟಾಚಾರ ಪ್ರಕರಣಗಳ ತನಿಖೆಯಲ್ಲಿ ಆರೋಪಗಳು ಸಾಬೀತಾಗಿದ್ದರೂ, ಅಂತಹ ವ್ಯಕ್ತಿಯನ್ನು ಮುಖ್ಯಮಂತ್ರಿಗಳ ಸಚಿವಾಲಯದ ಮಹತ್ವದ ಹುದ್ದೆಗೆ ನೇಮಕ ಮಾಡಿರುವುದು ಆಡಳಿತ ವ್ಯವಸ್ಥೆಯ ನೈತಿಕತೆಯನ್ನು ಪ್ರಶ್ನಿಸುವಂತಿದೆ. ಕೂಡಲೇ ಕುಂಞಿ ಅಹಮದ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಿ, ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.



