*ಮದುವೆಗೆ ನಾಲ್ಕೇ ದಿನ ಬಾಕಿ*: *ಆಹ್ವಾನ ಪತ್ರಿಕೆ ಹಂಚಲು ಹೋದ ವಧು ದುರಂತ ಅಂತ್ಯ- ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ*

ಪ್ರಗತಿವಾಹಿನಿ ಸುದ್ದಿ: ಇನ್ನೇನು ನಾಲ್ಕು ದಿನಗಳಲ್ಲಿ ಮದುವೆ ಸಂಭ್ರಮದಲ್ಲಿ ಮಿಂದೇಳಬೇಕಿದ್ದ ಯುವತಿ, ಮದುವೆಯ ಆಹ್ವಾನ ಪತ್ರಿಕೆ ಹಂಚಲು ಹೋಗುವಾಗಲೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈಕೆಯೊಂದಿಗೆ ದ್ವಿಚಕ್ರ ವಾಹನದಲ್ಲಿದ್ದ ಸಂಬಂಧಿ ಯುವತಿಯೂ ಪ್ರಾಣ ಕಳೆದುಕೊಂಡಿದ್ದಾರೆ. ಮದುವೆ ಮನೆಯಲ್ಲಿ ಮೊಳಗಬೇಕಿದ್ದ ಮಂಗಳವಾದ್ಯಗಳ ಬದಲಿಗೆ ಈಗ ಕುಟುಂಬಸ್ಥರ ಆಕ್ರಂದನ ಕೇಳಿಬರುತ್ತಿದೆ.
ಮೈಸೂರು ರಸ್ತೆಯ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದ ಸಮೀಪ ಗುರುವಾರ ಮಧ್ಯಾಹ್ನ 3.30ರ ಸುಮಾರಿಗೆ ಈ ದಾರುಣ ಅಪಘಾತ ಸಂಭವಿಸಿದೆ. ನಾಗಮಂಗಲ ಮೂಲದ ಸಿಂಧುಶ್ರೀ (29) ಮತ್ತು ಅವರ ಅತ್ತೆ ಮಗಳು ವಿದ್ಯಾ (19) ಮೃತ ದುರ್ದೈವಿಗಳು. ಹಿಂಬದಿಯಿಂದ ಬಂದ ಟ್ರಕ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದಿದ್ದು, ಈ ವೇಳೆ ಇಬ್ಬರ ಮೇಲೂ ಟ್ರಕ್ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಿಂಧುಶ್ರೀಗೆ ಸೋಮವಾರ ಕೆ.ಆರ್. ಪೇಟೆ ರಸ್ತೆಯ ಸಮುದಾಯ ಭವನವೊಂದರಲ್ಲಿ ಮದುವೆ ನಿಶ್ಚಯವಾಗಿತ್ತು. ಮದುವೆಗೆ ಇನ್ನು ನಾಲ್ಕು ದಿನಗಳು ಮಾತ್ರ ಬಾಕಿ ಇತ್ತು. ಈ ಹಿನ್ನೆಲೆಯಲ್ಲಿ ಕತ್ರಿಗುಪ್ಪೆಯಲ್ಲಿರುವ ಸಂಬಂಧಿಕರ ಮನೆಗೆ ಆಹ್ವಾನ ಪತ್ರಿಕೆ ನೀಡಲು ಸಿಂಧುಶ್ರೀ, ವಿದ್ಯಾ ಜೊತೆ ಹೋಂಡಾ ಆಕ್ಟಿವಾ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಟ್ರಕ್ ಇಬ್ಬರ ಪಾಲಿಗೆ ಮೃತ್ಯುವಾಗಿ ಎರಗಿದೆ.
ಅಪಘಾತದ ಬಳಿಕ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ರಾಜಸ್ಥಾನ ನೋಂದಣಿಯ ಟ್ರಕ್ ಅನ್ನು ಬ್ಯಾಟರಾಯನಪುರ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಲಕನಿಗಾಗಿ ಶೋಧ ಮುಂದುವರಿದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇಬ್ಬರ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಮತ್ತು ಸಂಬಂಧಿಕರು ಆಸ್ಪತ್ರೆಯ ಶವಾಗಾರದ ಬಳಿ ಜಮಾಯಿಸಿದ್ದಾರೆ. ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕಿದ್ದ ಸಂಬಂಧಿಕರು ದುಃಖದಲ್ಲಿ ಮುಳುಗಿದ್ದಾರೆ.
ಮಗಳ ಮದುವೆಗೆ ಅಕ್ಷತೆ ಕಾಳು ಹಾಕಬೇಕಿದ್ದ ತಾಯಿಗೆ, ಮಗಳ ಮೃತದೇಹದ ಮುಂದೆ ಕಣ್ಣೀರು ಹಾಕುವ ಸ್ಥಿತಿ ಎದುರಾಗಿದೆ. ಮಗಳನ್ನು ನೆನೆದು ತಾಯಿ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಸಂಬಂಧಿಕರು ತಾಯಿಯನ್ನು ಸಮಾಧಾನಪಡಿಸುತ್ತಿದ್ದರೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಟ್ರಕ್ ಚಾಲಕನಿಗೆ ಹುಡುಕಾಟ ನಡೆಸುತ್ತಿದ್ದಾರೆ.



