*ಏಳು ಕೊಲೆಗಳ ರಹಸ್ಯ ಬಯಲಿಗೆ ಪೊಲೀಸರ ಮಾಸ್ಟರ್ ಪ್ಲ್ಯಾನ್*: *ರುಬ್ಬುಗುಂಡಿನ ಮೇಲೆ ಲುಮಿನಾಲ್ ಟೆಸ್ಟ್*

ಪ್ರಗತಿವಾಹಿನಿ ಸುದ್ದಿ: ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಏಳು ಜನರ ಭೀಕರ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಆಸ್ತಿ ವಿಚಾರ ಮತ್ತು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಂದುಶೇಖರ್ (52) ಏಳು ಜನರನ್ನು ಹತ್ಯೆ ಮಾಡಿದ್ದಾನೆ ಎಂಬ ಆರೋಪದ ಬೆನ್ನಲ್ಲೇ ಪೊಲೀಸರು ಆತನ ಮನೆಯಲ್ಲಿ ಮಹತ್ವದ ಸಾಕ್ಷ್ಯಗಳಿಗಾಗಿ ಶೋಧ ನಡೆಸಿದ್ದಾರೆ. ಇತ್ತ, ಪ್ರಕರಣದಲ್ಲಿ ತಂದೆಗೆ ಸಾಥ್ ನೀಡಿದ ಆರೋಪ ಎದುರಿಸುತ್ತಿರುವ ಮಗಳ ವಿಚಾರಣೆಗೂ ನ್ಯಾಯಾಲಯ ಅನುಮತಿ ನೀಡಿದೆ.
ರುಬ್ಬುಗುಂಡಿನಿಂದಲೇ ಏಳು ಮಂದಿಯ ಹತ್ಯೆ?
ಪೊಲೀಸರ ತನಿಖೆಯ ಪ್ರಕಾರ, ಮನೆಯಲ್ಲಿದ್ದ ರುಬ್ಬುಗುಂಡಿನಿಂದಲೇ ಏಳು ಮಂದಿಯ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಪ್ರತಿಯೊಬ್ಬರನ್ನು ಹತ್ಯೆ ಮಾಡಿದ ಬಳಿಕ ರುಬ್ಬುಗುಂಡನ್ನು ಬಾತ್ರೂಮ್ನಲ್ಲಿ ತೊಳೆದು ಇಡುತ್ತಿದ್ದ ಎನ್ನಲಾಗಿದೆ. ರಕ್ತದ ಕಲೆಗಳು ಪತ್ತೆಯಾಗದಂತೆ ಇಡೀ ಮನೆಯನ್ನು ಸ್ವಚ್ಛಗೊಳಿಸಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಹಂತಕನ ಮನೆಯಲ್ಲಿ ಲುಮಿನಾಲ್ ಪರೀಕ್ಷೆ
ರಕ್ತದ ಸೂಕ್ಷ್ಮ ಕಲೆಗಳನ್ನು ಪತ್ತೆಹಚ್ಚಲು ಪೊಲೀಸರು ಇಂದುಶೇಖರ್ ಮನೆಯಲ್ಲಿ ಲುಮಿನಾಲ್ ಪರೀಕ್ಷೆ ನಡೆಸಿದ್ದಾರೆ. ಮನೆಯ ಹಾಲ್, ಬಾತ್ರೂಮ್ ಮತ್ತು ರುಬ್ಬುಗುಂಡಿನ ಮೇಲೆ ರಕ್ತದ ಕಲೆಗಳಿವೆಯೇ ಎಂಬುದನ್ನು ಪತ್ತೆಹಚ್ಚಲು ಪರೀಕ್ಷೆ ಮಾಡಲಾಗಿದೆ.
ಎಫ್ಎಸ್ಎಲ್ ತಜ್ಞರನ್ನು ಸ್ಥಳಕ್ಕೆ ಕರೆಸಿಕೊಂಡು ವಿವಿಧೆಡೆಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಆರೋಪಿ ಮನೆಯನ್ನು ಎಷ್ಟೇ ಸ್ವಚ್ಛಗೊಳಿಸಿದ್ದರೂ ಲುಮಿನಾಲ್ ಪರೀಕ್ಷೆಯ ಮೂಲಕ ಕಣ್ಣಿಗೆ ಕಾಣದ ರಕ್ತದ ಸೂಕ್ಷ್ಮ ಗುರುತುಗಳನ್ನು ಪತ್ತೆಹಚ್ಚುವ ಪ್ರಯತ್ನ ನಡೆಸಲಾಗಿದೆ.
ಸಂಗ್ರಹಿಸಿದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ರಕ್ತದ ಕಲೆಗಳ ಪರಿಶೀಲನೆ ಹಾಗೂ ಮೃತರ ಡಿಎನ್ಎ ಮಾದರಿಗಳೊಂದಿಗೆ ಹೊಂದಾಣಿಕೆ ಮಾಡುವ ಕಾರ್ಯ ನಡೆಯಲಿದೆ. ಇದರಿಂದ ಹತ್ಯೆ ನಡೆದ ಸ್ಥಳ ಮತ್ತು ಬಳಸಲಾದ ವಸ್ತುಗಳ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.
ಮಗಳ ವಿಚಾರಣೆಗೆ 10 ದಿನ ಪೊಲೀಸ್ ಕಸ್ಟಡಿ
ಇನ್ನು ಏಳು ಮಂದಿಯ ಹತ್ಯೆಗೆ ತಂದೆಗೆ ಮಗಳು ಸಾಥ್ ನೀಡಿದ್ದಾಳೆ ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ಜುವೆನೈಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಾಲಯ ಆಕೆಯನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ರಾಜಾಜಿನಗರ ಪೊಲೀಸರು ಆಕೆಯನ್ನು ವಿಚಾರಣೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ, ಏಳು ಜನರ ಹತ್ಯೆ ಪ್ರಕರಣದಲ್ಲಿ ರುಬ್ಬುಗುಂಡಿನ ಮೇಲಿನ ರಕ್ತದ ಗುರುತುಗಳು ಮತ್ತು ಎಫ್ಎಸ್ಎಲ್ ವರದಿ ಮಹತ್ವದ ಸಾಕ್ಷ್ಯವಾಗುವ ಸಾಧ್ಯತೆಯಿದೆ. ಮಗಳ ವಿಚಾರಣೆಯಿಂದಲೂ ಪ್ರಕರಣದ ಹಲವು ಆಯಾಮಗಳು ಬಹಿರಂಗವಾಗಲಿವೆಯೇ ಎಂಬ ಕುತೂಹಲ ಮೂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




