Belagavi NewsBelgaum NewsKannada NewsKarnataka News

*ಕೆಎಲ್‌ಇ ಸಂಸ್ಥೆಯ 111ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮ*

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೆಎಲ್‌ಇ ಸಂಸ್ಥೆಯ ಸೇವೆ ಅನನ್ಯ: ಗಣ್ಯರ ಮೆಚ್ಚುಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಶತಮಾನಕ್ಕೂ ಹೆಚ್ಚು ಕಾಲ ಅಮೂಲ್ಯ ಸೇವೆ ಸಲ್ಲಿಸಿರುವ ಕೆಎಲ್‌ಇ ಸಂಸ್ಥೆಯ 111ನೇ ಸಂಸ್ಥಾಪನಾ ದಿನಾಚರಣೆಯನ್ನು ಬೆಳಗಾವಿಯ ಜೆಎನ್‌ಎಂಸಿ ಆವರಣದಲ್ಲಿರುವ ಕೆಎಲ್‌ಇ ಶತಮಾನೋತ್ಸವ ಸಮಾವೇಶ ಕೇಂದ್ರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮವು ಕೆಎಲ್‌ಇ ಸಂಗೀತ ಶಾಲೆಯ ಬೋಧಕರು ಹಾಗೂ ವಿದ್ಯಾರ್ಥಿಗಳ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಐಐಟಿ ಧಾರವಾಡದ ನಿರ್ದೇಶಕ ಹಾಗೂ ಕೆಎಲ್‌ಇ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ ಪ್ರೊ. ವೆಂಕಟಪ್ಪಯ್ಯ ಆರ್. ದೇಸಾಯಿ ಅವರು ಮಾತನಾಡಿ, ಕೆಎಲ್‌ಇ ಸಂಸ್ಥೆಯೊಂದಿಗಿನ ತಮ್ಮ ಒಡನಾಟ ಹಾಗೂ ಶೈಕ್ಷಣಿಕ ಜೀವನ ರೂಪಿಸುವಲ್ಲಿ ಗುರುಗಳು ನೀಡಿದ ಮಾರ್ಗದರ್ಶನವನ್ನು ಸ್ಮರಿಸಿದರು. ಶಿಕ್ಷಣವು ವ್ಯಕ್ತಿಯ ಸಬಲೀಕರಣ ಮತ್ತು ಸಾಮಾಜಿಕ ಪರಿವರ್ತನೆಗೆ ಪ್ರಮುಖ ಸಾಧನವಾಗಿದೆ. ಸಂಸ್ಥೆಯ ಅಭಿವೃದ್ಧಿಗೆ ಡಾ. ಪ್ರಭಾಕರ ಬಿ. ಕೋರೆ ಅವರ ದೂರದೃಷ್ಟಿಯ ನಾಯಕತ್ವ ಮಹತ್ವದ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು. ಭಾರತೀಯ ಶೈಕ್ಷಣಿಕ ಪರಂಪರೆಯನ್ನು ಆಧುನಿಕ ಪ್ರವೃತ್ತಿಗಳೊಂದಿಗೆ ಬೆಸೆಯುವ ಅಗತ್ಯವಿದೆ ಎಂದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಅಮಿತ್ ಪಿ. ಕೋರೆ ಪ್ರಾಸ್ತಾವಿಕವಾಗಿ ಮಾತನಾಡಿ, 1916ರಲ್ಲಿ ಏಳು ದೂರದರ್ಶಿ ಶಿಕ್ಷಕರಿಂದ ಆರಂಭಗೊಂಡ ಸಂಸ್ಥೆ ಇಂದು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ 300ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಬೃಹತ್ ಜಾಲವಾಗಿ ಬೆಳೆದಿದೆ ಎಂದು ತಿಳಿಸಿದರು.

ಸಂಸ್ಥೆಯ ಭವಿಷ್ಯದ ಅಭಿವೃದ್ಧಿಗಾಗಿ ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನೆ ಮತ್ತು ನಾವೀನ್ಯತೆ, ಎಲ್ಲರಿಗೂ ಆರೋಗ್ಯ ಸೇವೆ, ಸುಸ್ಥಿರತೆ ಮತ್ತು ಸಾಮಾಜಿಕ ಜವಾಬ್ದಾರಿ ಹಾಗೂ ಸಾಂಸ್ಥಿಕ ಏಕತೆ ಸೇರಿದಂತೆ ಐದು ಆದ್ಯತೆಗಳನ್ನು ವಿವರಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಎಸ್. ಕೌಜಲಗಿ ಮಾತನಾಡಿ, ಸಪ್ತಋಷಿಗಳೆಂದೇ ಹೆಸರಾದ ಸಂಸ್ಥಾಪಕರು ಸತ್ಯ, ಸೇವೆ, ಪ್ರೀತಿ ಮತ್ತು ಸ್ವಾರ್ಥತ್ಯಾಗದ ಮೌಲ್ಯಗಳೊಂದಿಗೆ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಅವರ ತ್ಯಾಗ ಮತ್ತು ದೂರದೃಷ್ಟಿಯಿಂದಾಗಿ ಸಂಸ್ಥೆ ಇಂದು ಜಾಗತಿಕ ಮಟ್ಟದಲ್ಲಿ ವಿಸ್ತರಿಸಿದೆ. ಸಂಸ್ಥಾಪಕರ ಸ್ಮರಣೆ ನಮ್ಮ ಪಾಲಿಗೆ ಸದಾ ಸ್ಫೂರ್ತಿಯಾಗಿದೆ. ಅವರು ಆರಂಭಿಸಿದ ಶಿಕ್ಷಣ ದಾಸೋಹ ಶತಶತಮಾನಗಳವರೆಗೆ ಈ ಭೂಮಿಯಲ್ಲಿ ಬೆಳಗಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಬೋಧಕರು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಗೆ ಸಮರ್ಪಿತ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನು ಗೌರವಿಸಲಾಯಿತು. ಡಾ. ಸುಜಾತಾ ಜಾಲಿ ಹಾಗೂ ಡಾ. ಎಂ.ಬಿ. ಬೆಲ್ಲದ್ ಅವರನ್ನು ವಿಶೇಷವಾಗಿ ಸತ್ಕರಿಸಲಾಯಿತು.

ಕೆಎಲ್‌ಇ ಸಂಸ್ಥೆಯ ಕಾರ್ಯದರ್ಶಿ ಡಾ. ಸುನಿಲ್ ಜಲಾಲಪುರೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕೆಎಲ್‌ಇ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಪ್ರಭಾಕರ ಕೋರೆ, ಆಡಳಿತ ಮಂಡಳಿ ಸದಸ್ಯರು, ಆಜೀವ ಸದಸ್ಯರು, ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಬೋಧಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಆಜೀವ ಸದಸ್ಯ ಮಂಡಳಿಯ ಕಾರ್ಯಾಧ್ಯಕ್ಷ ಶೀತಲ್ ನಂಜಪ್ಪನವರ ವಂದಿಸಿದರು. ಡಾ. ಅವಿನಾಶ್ ಕವಿ, ಡಾ. ಮಹೇಶ್ ಗುರನಗೌಡರ, ಡಾ. ನೇಹಾ ದಡೆದ ಹಾಗೂ ಡಾ. ಆದಿತ್ಯ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button