Kannada NewsLatestNational

*ಯಾತ್ರಾ ಯೋಜನೆಯ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ*: *ಐವರು ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಯಾತ್ರಾ ಯೋಜನೆಯ 2 ಬಸ್‌ಗಳ ನಡುವೆ ಮುಖಾ ಮುಖಿ ಡಿಕ್ಕಿಯಾಗಿದ್ದು, ನಾಲ್ವರು ಯಾತ್ರಿಕರು ಹಾಗೂ ಓರ್ವ ಬೈಕ್‌ ಸವಾರ ಸೇರಿದಂತೆ ಐವರು ಸ್ಥಳದಲ್ಲೇ ಸಾವನ್ನಪಿರುವ ಘಟನೆ ನಡೆದಿದೆ.

ಅಡ್ಡ ಬಂದ ಬೈಕ್‌ ಸವಾರನನ್ನು ಬಚಾವ್‌ ಮಾಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಒಂದು ಬಸ್‌ ಡಿವೈಡರ್‌ ದಾಟಿ ಮತ್ತೊಂದು ಬಸ್‌ಗೆ ಡಿಕ್ಕಿಯಾಗಿದೆ. ಇದರಿಂದ ಐವರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರಲ್ಲಿ ಬೈಕ್‌ನಲ್ಲಿದ್ದ ಹಿಂಬದಿ ಸವಾರ ಸಹ ಸೇರಿದ್ದಾನೆ. ಈ ಅಪಘಾತದಲ್ಲಿ 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಪಂಜಾಬ್ ನ ತರಣ್ ತರಣ್ ಜಿಲ್ಲೆಯ ನೌಶೆಹ್ರಾ ಪನ್ನುವಾನ್ ಬಳಿಯ ರಾಷ್ಟ್ರೀಯ ಹೆದ್ದಾರಿ-54 ರಲ್ಲಿ ಈ ಅಪಘಾತ ನಡೆದಿದೆ. ಗಂಭೀರವಾಗಿ ಗಾಯಗೊಂಡ ಐದು ಪ್ರಯಾಣಿಕರನ್ನು ಅಮೃತಸರದ ಗುರುನಾನಕ್ ದೇವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳನ್ನು ತರಣ್ ತರಣ್‌ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಖ್ಯಮಂತ್ರಿ ತೀರ್ಥಯಾತ್ರೆ ಯೋಜನೆಯ ಒಂದು ಬಸ್ ಫರೀದ್‌ಕೋಟ್‌ನಿಂದ ಅಮೃತಸರಕ್ಕೆ ತೆರಳುತ್ತಿತ್ತು. ಇನ್ನೊಂದು ಬಸ್ ಅಮೃತಸರದಿಂದ ಮುಕ್ತ್‌ಸರ್‌ಗೆ ಹೋಗುತ್ತಿತ್ತು. ಡಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳ ಮುಂಭಾಗಕ್ಕೆ ಹಾನಿಯಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಜಾಬ್‌ ಸರ್ಕಾರದ ಮುಖ್ಯಮಂತ್ರಿ ತೀರ್ಥಯಾತ್ರೆ ಯೋಜನೆ ಅಡಿ 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ತೀರ್ಥಯಾತ್ರೆ ಕೈಗೊಳ್ಳಲು ಅರ್ಹರಾಗಿದ್ದಾರೆ. ಸರ್ಕಾರ ಅರ್ಹ ಯಾತ್ರಿಕರಿಗೆ ಹವಾನಿಯಂತ್ರಿತ ಸ್ಲೀಪರ್ ಬಸ್ ಪ್ರಯಾಣ, ವಸತಿ ಮತ್ತು ಆಹಾರವನ್ನು ಉಚಿತವಾಗಿ ಒದಗಿಸುತ್ತದೆ.


Related Articles

Back to top button