Kannada NewsKarnataka NewsLatestNational

*ಅರಣ್ಯ ಅಧಿಕಾರಿಯ ಮನೆ ಮೇಲೆ ಲೋಕಾಯುಕ್ತ ದಾಳಿ*: *ಚಿನ್ನದ ಖಜಾನೆ ಕಂಡು ಬೆಚ್ಚಿಬಿದ್ದ ಅಧಿಕಾರಿಗಳು*

ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಅಧಿಕಾರಿಯೊಬ್ಬರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಪತ್ತೆಯಾದರೆ ಹೇಗಿರಬಹುದು? ಅದೂ ಕಾನೂನುಬದ್ಧ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಮೇಲೆ ನಡೆದ ದಾಳಿಯಲ್ಲಿ ಇಷ್ಟೊಂದು ಸಂಪತ್ತು ಸಿಕ್ಕರೆ ಅಧಿಕಾರಿಗಳೇ ಬೆಚ್ಚಿಬೀಳುವುದು ಸಹಜ. ನಗದು ಹಣದ ಜೊತೆಗೆ ಕೆ.ಜಿ.ಗಟ್ಟಲೆ ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿದೆ. ಐಷಾರಾಮಿ ವಾಹನಗಳು, ರೆಸಾರ್ಟ್‌ಗಳು ಹಾಗೂ ವಿಲ್ಲಾಗಳ ವಿವರಗಳೂ ಬಯಲಾಗಿವೆ. ಒಟ್ಟು ಆಸ್ತಿಯ ಮೌಲ್ಯ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಅಷ್ಟಕ್ಕೂ ಈ ಖಜಾನೆ ಯಾರದ್ದು? ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿದ್ದೇನು ಗೊತ್ತಾ?

ಮಧ್ಯಪ್ರದೇಶದ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದ ಸಹಾಯಕ ನಿರ್ದೇಶಕ ಸಂಜೀವ್ ಕುಮಾರ್ ಶರ್ಮಾ ಅವರಿಗೆ ಸಂಬಂಧಿಸಿದ ಮೂರು ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಾ ಕಾಲದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ 26,36,800 ರೂಪಾಯಿ ನಗದು, ಸುಮಾರು 3.5 ಕೋಟಿ ರೂಪಾಯಿ ಮೌಲ್ಯದ 2.528 ಕೆ.ಜಿ ಚಿನ್ನ ಹಾಗೂ 2.94 ಲಕ್ಷ ರೂಪಾಯಿ ಮೌಲ್ಯದ 1.656 ಕೆ.ಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.

ಸಂಜೀವ್ ಕುಮಾರ್ ಶರ್ಮಾ ಅವರು ತಮ್ಮ ಪತ್ನಿ ಹಾಗೂ ಇತರರೊಂದಿಗೆ ಸೇರಿ ಕಾನೂನುಬದ್ಧ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದಾರೆ ಎಂಬ ದೂರು ಲೋಕಾಯುಕ್ತಕ್ಕೆ ಬಂದಿತ್ತು. ಪ್ರಾಥಮಿಕ ವಿಚಾರಣೆಯಲ್ಲಿ ಅವರ ಆಸ್ತಿ ತಿಳಿದಿರುವ ಆದಾಯಕ್ಕಿಂತ ಶೇ.228ರಷ್ಟು ಹೆಚ್ಚಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದ ಬಳಿಕ ಅಧಿಕಾರಿಗಳು ದಾಳಿ ನಡೆಸಿದ್ದರು.

ಭೋಪಾಲ್ ವಿಭಾಗದ ಲೋಕಾಯುಕ್ತ ತಂಡಗಳು ಪಚ್ಮಢಿಯಲ್ಲಿರುವ ಶರ್ಮಾ ಅವರ ಸರ್ಕಾರಿ ನಿವಾಸ ಮತ್ತು ಕಚೇರಿ ಹಾಗೂ ಛಿಂದ್ವಾರದಲ್ಲಿರುವ ಖಾಸಗಿ ನಿವಾಸದಲ್ಲಿ ಶೋಧ ನಡೆಸಿವೆ. ಈ ವೇಳೆ ಸ್ಕಾರ್ಪಿಯೋ, ಮಹೀಂದ್ರಾ KUV, ರಾಯಲ್ ಎನ್‌ಫೀಲ್ಡ್ ಬುಲೆಟ್ ಮತ್ತು ಸ್ಕೂಟರ್ ಸೇರಿದಂತೆ ನಾಲ್ಕು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಮೌಲ್ಯ 31.2 ಲಕ್ಷ ರೂಪಾಯಿ ಎನ್ನಲಾಗಿದೆ.

ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳೂ ಪತ್ತೆಯಾಗಿವೆ. ಅಲ್ಲದೆ, ಸುಮಾರು 2 ಕೋಟಿ ರೂಪಾಯಿ ಮೌಲ್ಯದ ‘ಇಕೋಟೆಲ್ ರೆಸಾರ್ಟ್’ ಹಾಗೂ 1 ಕೋಟಿ ರೂಪಾಯಿ ಮೌಲ್ಯದ ‘ಸೆರೆನಿಟಿ ದಿ ವಿಲ್ಲಾ’ ಎಂಬ ಆಸ್ತಿಗಳ ವಿವರಗಳು ತನಿಖೆಯಲ್ಲಿ ಲಭ್ಯವಾಗಿವೆ.

ಭೂ ವ್ಯವಹಾರಗಳಿಗೆ ಸಂಬಂಧಿಸಿದ 28 ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸದ್ಯ ಪತ್ತೆಯಾಗಿರುವ ಆಸ್ತಿಗಳ ಪ್ರಾಥಮಿಕ ಮೌಲ್ಯ ಸುಮಾರು 7.6 ಕೋಟಿ ರೂಪಾಯಿ ಎಂದು ಲೋಕಾಯುಕ್ತ ಅಂದಾಜಿಸಿದೆ. ಇದು ಶರ್ಮಾ ಅವರ ತಿಳಿದಿರುವ ಆದಾಯಕ್ಕಿಂತ ಶೇ.560ರಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಹೋಟೆಲ್ ಮತ್ತು ರೆಸಾರ್ಟ್‌ಗಳ ಅಧಿಕೃತ ಮೌಲ್ಯಮಾಪನ ಇನ್ನೂ ಪೂರ್ಣಗೊಂಡಿಲ್ಲ. ಭೂ ವ್ಯವಹಾರಗಳ ದಾಖಲೆಗಳ ಪರಿಶೀಲನೆಯೂ ಬಾಕಿ ಇರುವುದರಿಂದ ಒಟ್ಟು ಆಸ್ತಿಯ ಮೌಲ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ತನಿಖೆ ಪೂರ್ಣಗೊಂಡ ಬಳಿಕ ಅಕ್ರಮ ಆಸ್ತಿಯ ನಿಖರ ಪ್ರಮಾಣ ತಿಳಿಯಲಿದೆ.

Related Articles

Back to top button