CrimeKarnataka NewsLatest

*ಹಾರೆಯಿಂದ ಹೊಡೆದು ಮಗನನ್ನೇ ಕೊಲೆಗೈದ ತಂದೆ*

ಪ್ರಗತಿವಾಹಿನಿ ಸುದ್ದಿ: ಅಪ್ಪ-ಅಮ್ಮನ ಜಗಳದಲ್ಲಿ ಮಗ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ತಂದೆಯೊಬ್ಬ ಹಾರೆಯಿಂದ ಹೊಡೆದು ತನ್ನ ಮಗನನ್ನೇ ಕೊಲೆಗೈದಿದ್ದಾನೆ.

16 ವರ್ಷದ ಪುತ್ರ ಸುನೀಲ್ ತಂದೆಯಿಂದ ಕೊಲೆಯಾದ ಮಗ. ಆರೋಪಿಯನ್ನು ನಂಜಪ್ಪ ಎಂದು ಗುರುತಿಸಲಾಗಿದೆ. ಮಗನನ್ನು ಕೊಂದ ಬಳಿಕ ಸ್ಥಳದಲ್ಲೇ ಕುಳಿತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಾಯಕನಪಾಳ್ಯದಲ್ಲಿ ಈ ಘಟನೆ ನಡೆದಿದೆ. ಮಗನನ್ನು ತಂದೆಯೇ ಭೀಕರವಾಗಿ ಕೊಂದಿರುವುದನ್ನು ಮನೆಯ ಕಿಟಕಿ ಮೂಲಕ ನೋಡಿರುವ ರಂಜಿತಾ ಆಘಾತಕ್ಕೊಳಗಾಗಿದ್ದಾರೆ. ಕೂಡಲೇ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮಗನ ಕೊಲೆ ಮಾಡಿ ಮನೆಯಲ್ಲೇ ಕುಳಿತಿದ್ದ ಆರೋಪಿ ನಂಜಪ್ಪನನ್ನು ಬಂಧಿಸಿದ್ದಾರೆ.

20 ವರ್ಷಗಳ ಹಿಂದೆ ವಿವಾಹವಾಗಿದ್ದ ಆರೋಪಿ ನಂಜಪ್ಪ ಹಾಗೂ ರಂಜಿತಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಕೆಲ ತಿಂಗಳಿಂದ ಗಂಡ-ಹೆಂಡತಿ ನಡುವೆ ಜಗಳ ಆರಂಭವಾಗಿತ್ತು. 6 ತಿಂಗಳ ಹಿಂದೆ ಸಹ ಗಲಾಟೆಯಾಗಿ ದೂರು ದಾಖಲಾಗಿತ್ತು. ಪತಿ ವಿರುದ್ಧ ಪತ್ನಿಯೇ ಕೇಸ್​​ ದಾಖಲಿಸಿದ್ದ ಹಿನ್ನೆಲೆ ನಂಜಪ್ಪ ಜೈಲಿಗೆ ಕೂಡ ಹೋಗಿದ್ದ. ಜೈಲಿಂದ ಹೊರ ಬಂದ ಬಳಿಕ ಪತ್ನಿ ಜೊತೆ ರಾಜಿಯಾಗಿ ಮತ್ತೆ ಸಂಸಾರ ಆರಂಭಿಸಿದ್ದ. ಈ ನಡುವೆ ಇಂದು ಮುಂಜಾನೆ ದಂಪತಿ ನಡುವೆ ಮತ್ತೆ ಜಗಳ ಆಗಿದೆ. ಗಲಾಟೆ ವೇಳೆ ಪತ್ನಿ ರಂಜಿತಾಳನ್ನು ನಂಜಪ್ಪ ಮನೆಯಿಂದ ಆಚೆ ಹಾಕಿದ್ದ. ಬೆಳಿಗ್ಗೆ ಟ್ಯೂಷನ್​ಗೆ ಹೊರಟಿದ್ದ ಮಗ ಸುನೀಲ್​​ ಮನೆ ಬಾಗಿಲು ತೆಗೆದ ಕಾರಣ, ಆತನ ಮೇಲೆ ನಂಜಪ್ಪ ಹಾರೆಯಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡ ಸುನೀಲ್​​ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button