*ಕೆಪಿಎಸ್ ಸಿ ಪರೀಕ್ಷೆಗೆ ಹಳೇ ಹಾಲ್ ಟಿಕೆಟ್ ತಂದು ಯುವತಿಯ ಪರದಾಟ*: *ಮುಂದೇನಾಯ್ತು?*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಲೋಕಸೇವಾ ಆಯೋಗದ (KPSC) ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಇಂದು ರಾಜ್ಯಾದ್ಯಂತ ನಡೆಯುತ್ತಿದ್ದು, ಬಿಗಿ ಭದ್ರತೆಯ ನಡುವೆ ಆರಂಭವಾಗಿದೆ. ಈ ವೇಳೆ ಯುವತಿಯೊಬ್ಬರು ಪರೀಕ್ಷಾ ಕೇಂದ್ರಕ್ಕೆ ಬರುವ ಗಡಿಬಿಡಿಯಲ್ಲಿ ಹಳೆಯ ಹಾಲ್‌ಟಿಕೆಟ್ ತಂದು ಎಡವಟ್ಟು ಮಾಡಿಕೊಂಡಿರುವ ಘಟನೆ ನಡೆದಿದೆ.
ಪರೀಕ್ಷಾ ಕೇಂದ್ರದ ಬಳಿ ಬಂದು ಹಾಲ್ ಟಿಕೆಟ್ ನೋಡಿದ ಯುವತಿ ಶಾಕ್ ಆಗಿದ್ದಾರೆ. ಕೈಯಲ್ಲಿದ್ದುದು ಹಳೇ ಹಾಲ್ ಟಿಕೆಟ್. ಹಳೆಯ ಹಾಲ್‌ಟಿಕೆಟ್ ತಂದಿದ್ದರಿಂದ ಪರೀಕ್ಷಾ ಕೇಂದ್ರದ ಬಳಿ ಪರದಾಡಿದ್ದಾಳೆ.
ಈ ಹಿಂದೆ ಗ್ರಾಮ ಲೆಕ್ಕಾಧಿಕಾರಿ ಪರೀಕ್ಷೆ ಬರೆದಿದ್ದ ಯುವತಿ ಅದೇ ಪರೀಕ್ಷಾ ಪ್ರವೇಶ ಪತ್ರವನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಬಂದು ಎಡವಟ್ಟು ಮಾಡಿಕೊಂಡಿದ್ದಾರೆ. ನಂತರ ಪೊಲೀಸರ ಮುಂದೆ ಒಳಗೆ ಬಿಡುವಂತೆ ಗೋಗರೆದಿದ್ದಾಳೆ. ಆದರೆ, ನಿಯಮ ಉಲ್ಲಂಘಿಸಲಾಗಲ್ಲ ಎಂದು ಪೊಲೀಸರು ಆಕೆಯನ್ನು ಒಳಗೆ ಹೋಗಲು ಅವಕಾಶ ನೀಡಿಲ್ಲ. ಪರೀಕ್ಷೆ ಬರೆಯಲಾಗದೇ ನಿರಾಸೆಯಿಂದ ಯುವತಿ ಮನೆಗೆ ವಾಪಸ್ ಆಗಿದ್ದಾರೆ. ಈ ಘಟನೆ ಕಲಬುರಗಿಯ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.
ಇದೇ ವೇಳೆ ಕಲಬುರಗಿಯ ಪರೀಕ್ಷಾ ಕೇಂದ್ರವೊಂದರಲ್ಲಿ ಮತ್ತೊಂದು ಘಟನೆ ನಡೆದಿದೆ. ಬೀದರ್‌ನಿಂದ ಅಭ್ಯರ್ಥಿಯೊಬ್ಬರು ತಡವಾಗಿ ಆಗಮಿಸಿದ್ದರಿಂದ ಪ್ರವೇಶ ನಿರಾಕರಿಸಲಾಯಿತು. ಗೇಟ್ ಬಳಿ ಅಧಿಕಾರಿಗಳ ಮುಂದೆ ಪರೀಕ್ಷೆಗೆ ಅವಕಾಶ ನೀಡುವಂತೆ ಅಭ್ಯರ್ಥಿ ಕಣ್ಣೀರಿಟ್ಟಿದ್ದಾರೆ. ಬಳಿಕ ಅಭ್ಯರ್ಥಿಯ ಪರಿಸ್ಥಿತಿಯನ್ನು ಕಂಡು, ಅಂತಿಮವಾಗಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು.




