
ಪ್ರಗತಿವಾಹಿನಿ ಸುದ್ದಿ: ತಂದೆಯ ಅಗಲಿಕೆಯ ನೋವನ್ನು ತಾಳಲಾರದೆ ಪುತ್ರನೂ ಕೊನೆಯುಸಿರೆಳೆದಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಒಂದೇ ದಿನದ ಅಂತರದಲ್ಲಿ ತಂದೆ-ಮಗ ಇಬ್ಬರೂ ಮೃತಪಟ್ಟಿದ್ದು, ಕುಟುಂಬದ ಆಧಾರಸ್ತಂಭಗಳನ್ನೇ ಕಳೆದುಕೊಂಡ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ಈ ದುರ್ಘಟನೆಯಿಂದ ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತಿಪ್ಪನಹಟ್ಟಿ ಗ್ರಾಮದ ಅಮೀನ್ ಸಾಬ್ (58) ನವೆಂಬರ್ 15ರಂದು ದಿಢೀರ್ ಹೃದಯಾಘಾತದಿಂದ ಮೃತಪಟ್ಟಿದ್ದರು. ತಂದೆಯ ಸಾವಿನ ಸುದ್ದಿ ತಿಳಿದ ಪುತ್ರ ಮೆಹಬೂಬ್ ಸಾಬ್ (37) ತೀವ್ರ ಆಘಾತಕ್ಕೊಳಗಾಗಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ತಂದೆಯ ಅಂತ್ಯಕ್ರಿಯೆಗೂ ಮುನ್ನವೇ ಮಗನ ಸಾವು
ತಂದೆಯ ಅಗಲಿಕೆಯ ದುಃಖದಿಂದ ಮೆಹಬೂಬ್ ಸಾಬ್ ತೀವ್ರವಾಗಿ ನಿತ್ರಾಣಗೊಂಡಿದ್ದರು. ಇದೇ ವೇಳೆ ಅವರ ರಕ್ತದೊತ್ತಡ ದಿಢೀರ್ ಕುಸಿದು ಆರೋಗ್ಯದಲ್ಲಿ ಏರುಪೇರಾಗಿದೆ. ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಬಳಿಕ ತಿಪ್ಪನಹಟ್ಟಿ ಗ್ರಾಮದಲ್ಲಿ ತಂದೆ ಮತ್ತು ಮಗನ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ.
ಹಾವೇರಿಯಲ್ಲೂ ಸಾವಿನಲ್ಲೂ ಒಂದಾದ ಇಬ್ಬರು ಗೆಳೆಯರು
ಇದೇ ರೀತಿಯ ಮತ್ತೊಂದು ಮನಕಲಕುವ ಘಟನೆ ಹಾವೇರಿ ತಾಲೂಕಿನ ಮರೋಳ ಗ್ರಾಮದಲ್ಲೂ ನಡೆದಿದೆ. ಆತ್ಮೀಯ ಸ್ನೇಹಿತರಾದ ಅಭಿಷೇಕ್ ಮಾಗಡಿ ಮತ್ತು ಮುತ್ತು ಹುಲಿಕಟ್ಟಿ ಕುಷ್ಟಗಿ-ಗಜೇಂದ್ರಗಡ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಬದುಕಿದ್ದಾಗ ಸದಾ ಜೊತೆಯಾಗಿರುತ್ತಿದ್ದ ಇಬ್ಬರು ಸ್ನೇಹಿತರ ಅಂತ್ಯಕ್ರಿಯೆಯನ್ನೂ ಪೋಷಕರು ಸ್ವಗ್ರಾಮ ಮರೋಳದಲ್ಲಿ ಒಂದೇ ಕಡೆ ಒಟ್ಟಿಗೆ ನೆರವೇರಿಸಿದ್ದಾರೆ. ಇಬ್ಬರು ಗೆಳೆಯರ ದುರಂತ ಸಾವು ಹಾಗೂ ಒಂದೇ ಸ್ಥಳದಲ್ಲಿ ನಡೆದ ಅಂತ್ಯಕ್ರಿಯೆಯಿಂದ ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ.




