CrimeKannada NewsKarnataka NewsLatestNational

*ತಂದೆಯ ಮೇಲಿನ ಹಲ್ಲೆಗೆ ಪ್ರತೀಕಾರ*: *ಕ್ಯಾಂಟೀನ್‌ಗೆ ನುಗ್ಗಿ ಸಹೋದರಿಯರ ರಂಪಾಟ; ವಿಡಿಯೋ ವೈರಲ್*

ಪ್ರಗತಿವಾಹಿನಿ ಸುದ್ದಿ: ತಂದೆಯ ಮೇಲೆ ಹಲ್ಲೆ ನಡೆಸಿದ್ದಕ್ಕೆ ಆಕ್ರೋಶಗೊಂಡ ಇಬ್ಬರು ಹೆಣ್ಣುಮಕ್ಕಳು ಕ್ಯಾಂಟೀನ್‌ಗೆ ನುಗ್ಗಿ ಭಾರೀ ದಾಂಧಲೆ ನಡೆಸಿದ್ದಾರೆ. ಹಿಟ್ಟಿನ ಪಾತ್ರೆಗಳನ್ನು ಉರುಳಿಸಿ, ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಸಿಬ್ಬಂದಿಯ ಮೇಲೆ ನೀರು ಎರಚಿ, ಕ್ಯಾಂಟೀನ್ ಮುಚ್ಚುವಂತೆ ಕೂಗಾಡಿದ್ದಾರೆ. ಈ ಸಂಪೂರ್ಣ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಈ ಘಟನೆ ನಡೆದಿದೆ. ನವೆಂಬರ್ 4ರಂದು ಸಹೋದರಿಯರ ತಂದೆ ಮತ್ತು ಕ್ಯಾಂಟೀನ್ ಸಿಬ್ಬಂದಿ ನಡುವೆ ಜಗಳ ನಡೆದಿತ್ತು. ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಸಿಬ್ಬಂದಿ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಈ ಸಂಬಂಧ ಭೇಲುಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಕುಟುಂಬದ ಅಸಮಾಧಾನವಾಗಿದೆ.

ಇದರಿಂದ ಆಕ್ರೋಶಗೊಂಡ ಇಬ್ಬರು ಸಹೋದರಿಯರು ನವೆಂಬರ್ 16ರಂದು ಕ್ಯಾಂಟೀನ್‌ಗೆ ತೆರಳಿ ದಾಂಧಲೆ ನಡೆಸಿದ್ದಾರೆ. ಮೊದಲು ಸ್ಕೂಟರ್‌ನಲ್ಲಿ ಸ್ಥಳಕ್ಕೆ ಬಂದ ಸಹೋದರಿಯರು ಅಂಗಡಿಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಬಳಿಕ ಒಬ್ಬರು ಏಕಾಏಕಿ ಒಳನುಗ್ಗಿ ಹಿಟ್ಟು ತುಂಬಿದ್ದ ಪಾತ್ರೆಯನ್ನು ಉರುಳಿಸಿದ್ದಾರೆ. ಅಲ್ಲಿದ್ದ ವಸ್ತುಗಳನ್ನು ಎಸೆದು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಮತ್ತೊಬ್ಬರು ಸಿಬ್ಬಂದಿಯ ಮೇಲೆ ನೀರು ಎರಚುತ್ತಾ ಕ್ಯಾಂಟೀನ್ ಮುಚ್ಚುವಂತೆ ಕೂಗಾಡಿದ್ದಾರೆ.

ಅಂಗಡಿಯಲ್ಲಿದ್ದ ಪಾತ್ರೆಗಳನ್ನು ಒಡೆದು ಹಾಕಿರುವುದೂ ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ಮಹಿಳೆಯರ ಆಕ್ರೋಶ ಕಂಡು ಸಿಬ್ಬಂದಿ ಮತ್ತು ಸುತ್ತಮುತ್ತಲಿನ ಜನರು ಆತಂಕಗೊಂಡಿದ್ದಾರೆ.

ಸ್ಥಳೀಯರು ಸಹೋದರಿಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ಅವರು ಜಗ್ಗಿಲ್ಲ. ಅಂಗಡಿಯ ಸುತ್ತಮುತ್ತ ಮಕ್ಕಳು ಇರುವುದರಿಂದ ಎಚ್ಚರಿಕೆಯಿಂದ ವರ್ತಿಸುವಂತೆ ಸ್ಥಳೀಯರೊಬ್ಬರು ಮನವಿ ಮಾಡಿದ್ದಾರೆ. ಆದರೆ ಸಹೋದರಿಯರು ಅವರ ಮಾತಿಗೂ ಕೋಪದಿಂದ ಪ್ರತಿಕ್ರಿಯಿಸಿದ್ದಾರೆ. ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗದಂತೆ ಇತರರು ಮಧ್ಯಪ್ರವೇಶಿಸಿದ್ದಾರೆ.

ಇತ್ತ ಕ್ಯಾಂಟೀನ್ ಮಾಲೀಕರು ಕೂಡ ಸಹೋದರಿಯರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಎಸಿಪಿ ಗೌರವ್ ಕುಮಾರ್ ತಿಳಿಸಿದ್ದಾರೆ. ತಂದೆಗೆ ನ್ಯಾಯ ಕೊಡಿಸಬೇಕೆಂಬ ಆಕ್ರೋಶ ಒಂದೆಡೆಯಾದರೆ, ಕಾನೂನನ್ನು ಕೈಗೆತ್ತಿಕೊಂಡು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿರುವುದು ಮತ್ತೊಂದೆಡೆ ಚರ್ಚೆಗೆ ಕಾರಣವಾಗಿದೆ.

Related Articles

Back to top button