*ಕೋತಿಯ ದಾಳಿಯಿಂದ ಟೆರೇಸಿನಲ್ಲಿ ಬಟ್ಟೆ ಒಣಗಿಸುತ್ತಿದ್ದ 28 ವರ್ಷದ ಮಹಿಳೆ ಸಾವು*

ಪ್ರಗತಿವಾಹಿನಿ ಸುದ್ದಿ: ಮನೆಯ ಟೆರೇಸ್ ಮೇಲೆ ಬಟ್ಟೆ ಒಣಗಿಸಲು ಹೋದ ಮಹಿಳೆಗೆ ಕೋತಿಗಳ ಗುಂಪು ಏಕಾಏಕಿ ದಾಳಿ ನಡೆಸಿದೆ. ಈ ಅನಿರೀಕ್ಷಿತ ದಾಳಿಯಿಂದ ತೀವ್ರ ಭಯಭೀತರಾದ ಮಹಿಳೆ ಕುಸಿದು ಬಿದ್ದಿದ್ದು, ಬಳಿಕ ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ. ಕೇವಲ 28 ವರ್ಷದ ಮಹಿಳೆಯ ದುರಂತ ಸಾವು ಕುಟುಂಬಸ್ಥರನ್ನು ಆಘಾತಕ್ಕೀಡು ಮಾಡಿದೆ.
ರಾಜಸ್ಥಾನದ ಕೋಟಾ ಜಿಲ್ಲೆಯ ಉದ್ಯೋಗ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಗಾನ್ ನೆರೆಹೊರೆಯಲ್ಲಿ ಘಟನೆ ನಡೆದಿದೆ. ಮೃತರನ್ನು ಕನ್ಸುವಾ ಪ್ರದೇಶದ ನಿವಾಸಿ ರೇಣು ಭಟ್ ಎಂದು ಗುರುತಿಸಲಾಗಿದೆ.
ರೇಣು ಮನೆಯ ಟೆರೇಸ್ ಮೇಲೆ ಬಟ್ಟೆ ಒಣಗಿಸಲು ಹೋಗಿದ್ದಾಗ ಏಕಾಏಕಿ ಮಂಗಗಳ ಗುಂಪು ಅಲ್ಲಿಗೆ ಬಂದಿದೆ. ಈ ವೇಳೆ ಒಂದು ಕೋತಿ ಅವರ ಮುಖ ಮತ್ತು ಬೆನ್ನಿನ ಮೇಲೆ ಉಗುರುಗಳಿಂದ ಪರಚಿದೆ. ಆತ್ಮರಕ್ಷಣೆಗಾಗಿ ಕೋಲನ್ನು ಎತ್ತಿಕೊಂಡರೂ ಕೋತಿ ಅವರ ಹೆಗಲ ಮೇಲೆ ಹತ್ತಿ ಮತ್ತೆ ದಾಳಿ ನಡೆಸಿದೆ.
ಕೋತಿಗಳ ದಾಳಿಯಿಂದ ಭಯಭೀತರಾದ ರೇಣು ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದಾರೆ. ಅವರ ಕಿರುಚಾಟ ಕೇಳಿ ಕುಟುಂಬಸ್ಥರು ಟೆರೇಸ್‌ಗೆ ಧಾವಿಸಿದಾಗ ರೇಣು ನೆಲದ ಮೇಲೆ ಬಿದ್ದಿದ್ದರು. ಮುಖ ಮತ್ತು ಬೆನ್ನಿನ ಮೇಲೆ ಕೋತಿಯ ಉಗುರುಗಳಿಂದಾದ ಗಾಯದ ಗುರುತುಗಳಿದ್ದವು. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
2018ರಲ್ಲಿ ಪ್ರದೀಪ್ ಭಟ್ ಅವರನ್ನು ವಿವಾಹವಾಗಿದ್ದ ರೇಣು ಅವರಿಗೆ ಪುಟ್ಟ ಮಗಳಿದ್ದಾಳೆ. ಈ ಪ್ರದೇಶದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಮತ್ತು ಸ್ಥಳೀಯರು ಆರೋಪಿಸಿದ್ದಾರೆ.
ಸ್ಥಳೀಯ ಕೌನ್ಸಿಲರ್ ಸಪ್ನಾ ಬರ್ಟ್ ಕೂಡ ಘಟನೆಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಮಂಗಗಳನ್ನು ಸೆರೆಹಿಡಿಯಲು ತಕ್ಷಣ ಕಾರ್ಯಾಚರಣೆ ಆರಂಭಿಸುವಂತೆ ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.
ಒಟ್ಟಿನಲ್ಲಿ, ಮನೆಯ ಟೆರೇಸ್‌ನಲ್ಲೇ ನಡೆದ ಕೋತಿ ದಾಳಿಯಿಂದ ಯುವತಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.




