*ಎರಡನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ*: *ಫ್ರೀಡಂ ಪಾರ್ಕ್ ಬಿಟ್ಟು ಕದಲದಿರಲು ಪಟ್ಟು*

ಪ್ರಗತಿವಾಹಿನಿ ಸುದ್ದಿ: ಮಾಸಿಕ ₹15,000 ಗೌರವಧನ ಹಾಗೂ ನಿವೃತ್ತಿ ವೇಳೆ ₹5 ಲಕ್ಷ ಇಡಿಗಂಟು ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಸಾವಿರಾರು ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ನಡೆಸುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದಿಂದ ಲಿಖಿತ ಭರವಸೆ ಸಿಗುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಕಾರ್ಯಕರ್ತೆಯರು ಪಟ್ಟು ಹಿಡಿದಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಶಾ ಕಾರ್ಯಕರ್ತೆಯರು ಬೆಂಗಳೂರಿಗೆ ಆಗಮಿಸುತ್ತಿದ್ದು, ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚಾಗಿದೆ. ಜಾಗದ ಕೊರತೆಯಿಂದಾಗಿ ಫ್ರೀಡಂ ಪಾರ್ಕ್ ಪಕ್ಕದ ಕಾಳಿದಾಸ ರಸ್ತೆ ಹಾಗೂ ಶೇಷಾದ್ರಿ ರಸ್ತೆಯಲ್ಲೂ ಕುಳಿತು ಪ್ರತಿಭಟನೆ ಮುಂದುವರಿಸಿದ್ದಾರೆ. ಇದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸಂಚಾರ ಪೊಲೀಸರು ಎರಡೂ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರ ಬಂದ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಸದ್ಯ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ₹5,000 ಹಾಗೂ ಕೇಂದ್ರ ಸರ್ಕಾರದಿಂದ ₹3,000 ಸೇರಿ ಒಟ್ಟು ₹8,000 ಗೌರವಧನ ಸಿಗುತ್ತಿದೆ. ಆದರೆ ಹರಿಯಾಣದಲ್ಲಿ ₹15,000, ಕೇರಳದಲ್ಲಿ ₹12,000, ಪಶ್ಚಿಮ ಬಂಗಾಳದಲ್ಲಿ ₹11,250 ಹಾಗೂ ಆಂಧ್ರಪ್ರದೇಶದಲ್ಲಿ ₹10,000 ಗೌರವಧನ ನೀಡಲಾಗುತ್ತಿದೆ ಎಂದು ಆಶಾ ಕಾರ್ಯಕರ್ತೆಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಪ್ರಮುಖ 8 ಬೇಡಿಕೆಗಳೇನು?
ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ಮಾಸಿಕ ₹15,000 ಗೌರವಧನ ನಿಗದಿಪಡಿಸಬೇಕು. ಸಮಸ್ತ ಆ್ಯಪ್ ಮೂಲಕ ಒತ್ತಾಯಪೂರ್ವಕವಾಗಿ ನೀಡಲಾಗುತ್ತಿರುವ ಮೊಬೈಲ್ ಕೆಲಸದ ಒತ್ತಡ ನಿಲ್ಲಿಸಬೇಕು ಅಥವಾ ಮೊಬೈಲ್ ಸೌಲಭ್ಯ, ಸೂಕ್ತ ಪ್ರೋತ್ಸಾಹಧನ ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಈಗಾಗಲೇ ನಿವೃತ್ತರಾಗಿರುವ ಆಶಾ ಕಾರ್ಯಕರ್ತೆಯರಿಗೆ ಬಾಕಿ ಇರುವ ಇಡಿಗಂಟನ್ನು ತಕ್ಷಣ ಬಿಡುಗಡೆ ಮಾಡಬೇಕು. ಆಶಾ ನಿಧಿಯಲ್ಲಿ ಬಾಕಿ ಉಳಿದಿರುವ ಪ್ರೋತ್ಸಾಹಧನವನ್ನು ಪಾವತಿಸಬೇಕು ಎಂಬುದು ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ.
ಆಶಾ ಸುಗಮಕಾರರನ್ನು ಮರುನೇಮಕ ಮಾಡಿಕೊಂಡು ಸೂಕ್ತ ವೇತನ ನೀಡಬೇಕು. ಬಾಕಿ ಇರುವ ಒಂದು ವರ್ಷದ ₹1,500 ಪಾವತಿಸಬೇಕು. ಎನ್ಐಒಎಸ್ ತರಬೇತಿ ಪೂರ್ಣಗೊಳಿಸಿದ ಆಶಾ ಕಾರ್ಯಕರ್ತೆಯರು ಮತ್ತು ಸುಗಮಕಾರರಿಗೆ ಪ್ರತಿ ತರಬೇತಿಗೆ ₹5,000 ವಿಶೇಷ ಪ್ರೋತ್ಸಾಹಧನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದರ ಜೊತೆಗೆ ತೀವ್ರ ಕಾಯಿಲೆಗಳಿಂದ ಬಳಲುವ ಸಂದರ್ಭದಲ್ಲಿ ಚಿಕಿತ್ಸಾ ಅವಧಿಗೆ ಕನಿಷ್ಠ ಮೂರು ತಿಂಗಳ ಗೌರವಧನ ಹಾಗೂ ನಿಗದಿತ ಪ್ರೋತ್ಸಾಹಧನ ನೀಡಬೇಕು. ಸೇವಾ ನಿವೃತ್ತಿ ಇಡಿಗಂಟನ್ನು ಪಶ್ಚಿಮ ಬಂಗಾಳದ ಮಾದರಿಯಲ್ಲಿ ₹5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ, ಎಂಟು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ಹೋರಾಟ ತೀವ್ರಗೊಳಿಸಿದ್ದಾರೆ. ಸರ್ಕಾರ ಲಿಖಿತ ಭರವಸೆ ನೀಡುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಘೋಷಿಸಿರುವುದರಿಂದ ಮುಂದಿನ ದಿನಗಳಲ್ಲಿ ಈ ಹೋರಾಟ ಯಾವ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.



