*ಟ್ರಂಪ್ ಹತ್ಯೆಗೆ ಇರಾನ್‌ನಿಂದಲೇ ಸುಪಾರಿ?*: *ಪಾಕಿಸ್ತಾನಿ ಪ್ರಜೆಯ ಸಂಚಿಗೆ 27 ವರ್ಷ ಜೈಲು*

ಪ್ರಗತಿವಾಹಿನಿ ಸುದ್ದಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಪ್ರಮುಖ ರಾಜಕೀಯ ನಾಯಕರನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಪ್ರಕರಣದಲ್ಲಿ ಪಾಕಿಸ್ತಾನದ 48 ವರ್ಷದ ಆಸಿಫ್ ಮರ್ಚೆಂಟ್‌ಗೆ ಅಮೆರಿಕದ ನ್ಯಾಯಾಲಯ 27 ವರ್ಷ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಪರವಾಗಿ ಈ ಸಂಚು ರೂಪಿಸಿದ್ದ ಆರೋಪ ಆತನ ಮೇಲಿದೆ.
ಬ್ರೂಕ್ಲಿನ್‌ನ ಫೆಡರಲ್ ನ್ಯಾಯಾಲಯದ ನ್ಯಾಯಮೂರ್ತಿ ಎರಿಕ್ ಕೊಮಿಟೀ ಅವರು ನವೆಂಬರ್ 17ರಂದು 330 ತಿಂಗಳ ಜೈಲು ಶಿಕ್ಷೆ ಪ್ರಕಟಿಸಿದ್ದಾರೆ. 2026ರ ಮಾರ್ಚ್‌ನಲ್ಲಿ ಭಯೋತ್ಪಾದನೆಗೆ ಯತ್ನ ಮತ್ತು ಹಣ ನೀಡಿ ಹತ್ಯೆ ಮಾಡಿಸಲು ಸಂಚು ರೂಪಿಸಿದ ಆರೋಪಗಳಲ್ಲಿ ಮರ್ಚೆಂಟ್ ತಪ್ಪಿತಸ್ಥನೆಂದು ಘೋಷಿಸಲಾಗಿತ್ತು.
ಈ ಸಂಚಿನ ಹಿಂದೆ 2020ರಲ್ಲಿ ಇರಾಕ್‌ನ ಬಾಗ್ದಾದ್‌ನಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಇರಾನ್‌ನ ಪ್ರಮುಖ ಸೇನಾ ಕಮಾಂಡರ್ ಖಾಸಿಂ ಸೊಲೈಮಾನಿ ಹತರಾದ ಘಟನೆ ಕಾರಣವಾಗಿತ್ತು ಎಂದು ಅಮೆರಿಕದ ಪ್ರಾಸಿಕ್ಯೂಷನ್ ಆರೋಪಿಸಿದೆ. ಈ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಐಆರ್‌ಜಿಸಿ ಮರ್ಚೆಂಟ್‌ನನ್ನು ಬಳಸಿಕೊಂಡು ಅಮೆರಿಕದ ರಾಜಕೀಯ ನಾಯಕರನ್ನು ಗುರಿಯಾಗಿಸಲು ಯೋಜನೆ ರೂಪಿಸಿತ್ತು ಎನ್ನಲಾಗಿದೆ.
2024ರ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್, ಆಗಿನ ಅಧ್ಯಕ್ಷ ಜೋ ಬೈಡನ್ ಹಾಗೂ ಮಾಜಿ ವಿಶ್ವಸಂಸ್ಥೆ ರಾಯಭಾರಿ ನಿಕ್ಕಿ ಹ್ಯಾಲಿ ಸಂಭಾವ್ಯ ಗುರಿಗಳಾಗಿದ್ದರು. ಆದರೆ ಅಂತಿಮವಾಗಿ ಟ್ರಂಪ್ ಅವರೇ ಗುರಿಯಾಗಿದ್ದರು ಎಂದು ಮರ್ಚೆಂಟ್ ವಿಚಾರಣೆ ವೇಳೆ ನೀಡಿದ ಸಾಕ್ಷ್ಯದಲ್ಲಿ ತಿಳಿದುಬಂದಿದೆ.
ಅಮೆರಿಕದ ನ್ಯಾಯಾಂಗ ಇಲಾಖೆಯ ಪ್ರಕಾರ, ಮರ್ಚೆಂಟ್ 2022ರ ಸುಮಾರಿಗೆ ಐಆರ್‌ಜಿಸಿಯ ಸಂಪರ್ಕಕ್ಕೆ ಬಂದಿದ್ದ. ಇರಾನ್‌ಗೆ ಧಾರ್ಮಿಕ ಯಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ತನ್ನ ಸಂಬಂಧಿಕರ ಮೂಲಕ ಐಆರ್‌ಜಿಸಿ ಸಂಪರ್ಕಾಧಿಕಾರಿಯನ್ನು ಪರಿಚಯಿಸಿಕೊಂಡಿದ್ದ. ನಂತರ ಟೆಹ್ರಾನ್‌ನಲ್ಲಿ ಹಲವು ಬಾರಿ ಭೇಟಿಯಾಗಿ, ರಹಸ್ಯ ಕಾರ್ಯಾಚರಣೆ ಮತ್ತು ನಿಗಾ ತಪ್ಪಿಸುವ ತಂತ್ರಗಳ ಬಗ್ಗೆ ತರಬೇತಿ ಪಡೆದಿದ್ದ ಎಂದು ಆರೋಪಿಸಲಾಗಿದೆ.
2024ರ ಏಪ್ರಿಲ್‌ನಲ್ಲಿ ಅಮೆರಿಕಕ್ಕೆ ಬಂದ ಮರ್ಚೆಂಟ್, ರಾಜಕೀಯ ನಾಯಕರ ಹತ್ಯೆಗೆ ನೆರವು ನೀಡುವ ವ್ಯಕ್ತಿಗಳನ್ನು ಹುಡುಕಲು ಆರಂಭಿಸಿದ್ದ. ರಾಜಕೀಯ ರ್ಯಾಲಿಗಳಲ್ಲಿ ಗುರಿಗಳನ್ನು ಗುರುತಿಸುವುದು ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಆದರೆ ಈ ಸಂಚಿನ ಬಗ್ಗೆ ಮರ್ಚೆಂಟ್‌ನ ಪರಿಚಯಸ್ಥರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ತನಿಖೆಗೆ ಸಹಕರಿಸಿದ ಅವರು, ಮರ್ಚೆಂಟ್‌ನೊಂದಿಗೆ ಸಂಪರ್ಕದಲ್ಲಿದ್ದರು. ಆತ ಹತ್ಯೆಗಾರರೆಂದು ಭಾವಿಸಿ ಭೇಟಿಯಾದ ವ್ಯಕ್ತಿಗಳು ವಾಸ್ತವದಲ್ಲಿ ರಹಸ್ಯ ಕಾರ್ಯಾಚರಣೆಯಲ್ಲಿದ್ದ ಎಫ್‌ಬಿಐ ಅಧಿಕಾರಿಗಳಾಗಿದ್ದರು.
ಮೂರು ಬಾರಿ ಭೇಟಿಯಾದ ಮರ್ಚೆಂಟ್, ಸಂಚಿನ ಆರಂಭಿಕ ಹಣವಾಗಿ 5,000 ಡಾಲರ್ ನೀಡಿದ್ದ. ವಿದೇಶದಲ್ಲಿದ್ದ ಸಂಬಂಧಿಕರ ನೆರವಿನಿಂದ ಈ ಹಣ ಪಡೆದಿದ್ದ ಎಂದು ನ್ಯಾಯಾಲಯದಲ್ಲಿ ಸಾಕ್ಷ್ಯ ಮಂಡಿಸಲಾಯಿತು. 2024ರ ಜುಲೈ 12ರಂದು ಟೆಕ್ಸಾಸ್‌ನ ರಿಚ್ಮಂಡ್‌ನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಲು ಸಿದ್ಧವಾಗಿದ್ದಾಗ ಆತನನ್ನು ಬಂಧಿಸಲಾಯಿತು. ಹೀಗಾಗಿ ಯಾವುದೇ ದಾಳಿ ನಡೆಯುವ ಮೊದಲೇ ಸಂಚು ವಿಫಲವಾಗಿತ್ತು.
ವಿಚಾರಣೆ ವೇಳೆ ಮರ್ಚೆಂಟ್, ಇರಾನ್‌ನ ಐಆರ್‌ಜಿಸಿ ಅಧಿಕಾರಿಯ ಒತ್ತಡದಿಂದ ಈ ಕೆಲಸಕ್ಕೆ ಮುಂದಾಗಿದ್ದೆ. ಇರಾನ್‌ನಲ್ಲಿರುವ ತನ್ನ ಕುಟುಂಬದ ಸುರಕ್ಷತೆಯ ಬಗ್ಗೆ ಆತಂಕವಿತ್ತು ಎಂದು ಹೇಳಿದ್ದ. ಅಲ್ಲದೆ, ಅಮೆರಿಕದ ಅಧಿಕಾರಿಗಳು ಈ ಸಂಚನ್ನು ವಿಫಲಗೊಳಿಸುತ್ತಾರೆ ಎಂಬ ನಿರೀಕ್ಷೆಯೂ ತನಗಿತ್ತು ಎಂದು ಸಾಕ್ಷ್ಯ ನೀಡಿದ್ದ.
ಆದರೆ ಪ್ರಾಸಿಕ್ಯೂಷನ್ ಪಕ್ಷವು ಆತನ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು, ಟ್ರಂಪ್ ರ್ಯಾಲಿಗಳ ಕುರಿತು ನಡೆಸಿದ್ದ ಇಂಟರ್ನೆಟ್ ಹುಡುಕಾಟಗಳು ಸೇರಿದಂತೆ ಹಲವು ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಮರ್ಚೆಂಟ್ ಪರ ವಕೀಲರು ತಿಳಿಸಿದ್ದಾರೆ. ಇತ್ತ ಇರಾನ್ ಸರ್ಕಾರವು ಅಮೆರಿಕದ ಅಧಿಕಾರಿಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಆರೋಪವನ್ನು ನಿರಾಕರಿಸಿದೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಇರಾನ್‌ನ ಪ್ರಭಾವಶಾಲಿ ಸೇನಾ ಪಡೆ. 1979ರ ಇರಾನ್ ಕ್ರಾಂತಿಯ ನಂತರ ದೇಶದ ಇಸ್ಲಾಮಿಕ್ ಆಡಳಿತ ವ್ಯವಸ್ಥೆಯನ್ನು ರಕ್ಷಿಸುವ ಉದ್ದೇಶದಿಂದ ಈ ಪಡೆಯನ್ನು ಸ್ಥಾಪಿಸಲಾಯಿತು. ಇರಾನ್‌ನ ಸಾಂಪ್ರದಾಯಿಕ ಸೇನೆಯಿಂದ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಈ ಪಡೆ, ದೇಶದ ಹೊರಗಿನ ಕಾರ್ಯಾಚರಣೆಗಳಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.



