Film & EntertainmentKannada NewsKarnataka NewsLatest

*ಎರಡನೇ ಚಿತ್ರದಲ್ಲೇ ರಾಷ್ಟ್ರಮಟ್ಟದ ಗೌರವ*: *IFFI ಭಾರತೀಯ ಪನೋರಮಾಗೆ ಆಯ್ಕೆಯಾದ ತುಳು ಸಿನಿಮಾ*

ಪ್ರಗತಿವಾಹಿನಿ ಸುದ್ದಿ: ತುಳು ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಿದೆ. ಅನುಪಮ ಶರಧಿ ನಿರ್ಮಿಸಿ, ನಿರ್ದೇಶಿಸಿರುವ ತುಳು ಚಿತ್ರ ‘ಪಿಲಿ ಚನ್ನೆ’ 57ನೇ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾ (IFFI) 2026ರ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿದೆ. ವಿಶೇಷವೆಂದರೆ, ಅನುಪಮ ಶರಧಿ ಅವರ ನಿರ್ದೇಶನದ ಎರಡನೇ ಚಿತ್ರವೇ ರಾಷ್ಟ್ರಮಟ್ಟದ ಗೌರವಕ್ಕೆ ಪಾತ್ರವಾಗಿದೆ. ಒಂದೇ ಚಿತ್ರದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರ ಬಹುಮುಖ ಪ್ರತಿಭೆ ಈಗ ಗಮನ ಸೆಳೆದಿದೆ.

ಈ ಹಿಂದೆ ‘ನಡುಬೆಟ್ಟು ಅಪ್ಪಣ್ಣ’ ಎಂಬ ಕನ್ನಡ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದ ಅನುಪಮ ಶರಧಿ, ಇದೀಗ ತುಳು ಭಾಷೆಯಲ್ಲಿ ‘ಪಿಲಿ ಚನ್ನೆ’ ಚಿತ್ರವನ್ನು ರೂಪಿಸಿದ್ದಾರೆ. ಚಿತ್ರದ ನಿರ್ಮಾಣದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ಗಾಯನ, ವಸ್ತ್ರ ವಿನ್ಯಾಸ ಮತ್ತು ನಟನೆಯ ಜವಾಬ್ದಾರಿಗಳನ್ನೂ ಸ್ವತಃ ನಿರ್ವಹಿಸಿದ್ದಾರೆ.

ಕಾಡಿನ ಹಿನ್ನೆಲೆಯ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಭವಿಷ್ಯ ಸಿನಿಮಾ ಬ್ಯಾನರ್‌ನಲ್ಲಿ ನಿರ್ಮಿಸಲಾಗಿದೆ. ಚಿತ್ರದ ಛಾಯಾಗ್ರಹಣವನ್ನು ಪಿ.ವಿ.ಆರ್. ಸ್ವಾಮಿ ನಿರ್ವಹಿಸಿದ್ದು, ಅತಿಶಯ್ ಜೈನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಂಜೀವ್ ರೆಡ್ಡಿ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಪಳನಿ ಡಿ. ಸೇನಾಪತಿ ಅವರು 5.1 ಆಡಿಯೋ ಮಿಕ್ಸಿಂಗ್ ಮಾಡಿದ್ದಾರೆ. ಭವಾನಿ ಶಂಕರ್ ಆಡ್ತಲೆ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.

ಚಿತ್ರದಲ್ಲಿ ಶಿಲ್ಪಾ ನಾಗರಾಜ್, ನವೀನ್ ಡಿ. ಪಡೀಲ್, ಅನುಪಮ ಶರಧಿ, ವಿಜಯ ಹರಿ ರೈ, ರಾಧಾಕೃಷ್ಣ ಕುಂಬ್ಳೆ, ಗಂಗಾಧರ ನೆಲ್ಲಿಕೋಡ್, ಶಿಲ್ಪ ಸನತ್ ಹಾಗೂ ರವಿ ಪೆರ್ಲಂಪಾಡಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಒಂದೆಡೆ ಚಿತ್ರ ನಿರ್ಮಾಣದಿಂದ ಹಿಡಿದು ಅಭಿನಯದವರೆಗೆ ಹಲವು ಜವಾಬ್ದಾರಿಗಳನ್ನು ನಿಭಾಯಿಸಿರುವ ಅನುಪಮ ಶರಧಿ ಅವರ ಪರಿಶ್ರಮ ಗಮನ ಸೆಳೆದಿದೆ. ಮತ್ತೊಂದೆಡೆ, ಅವರ ಎರಡನೇ ನಿರ್ದೇಶನದ ಚಿತ್ರವೇ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿರುವುದು ವಿಶೇಷ ಸಾಧನೆಯಾಗಿದೆ. ಈ ಆಯ್ಕೆಯ ಮೂಲಕ ತುಳು ಭಾಷೆ, ಸಂಸ್ಕೃತಿ ಹಾಗೂ ತುಳು ಚಿತ್ರರಂಗಕ್ಕೆ ರಾಷ್ಟ್ರಮಟ್ಟದಲ್ಲಿ ಮತ್ತೊಂದು ಮನ್ನಣೆ ದೊರೆತಂತಾಗಿದೆ.

Related Articles

Back to top button