*1500 ಕೋಟಿ ಕ್ಲಬ್ ಸೇರಿದ ‘ರಾಮಾಯಣ’*: *2000 ಕೋಟಿ ಮೇಲೆ ಯಶ್ ಸಿನಿಮಾದ ಕಣ್ಣು, ಮುಂದಿನ ಸವಾಲೇನು?*

ಪ್ರಗತಿವಾಹಿನಿ ಸುದ್ದಿ: ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಓಟ ಮುಂದುವರಿಸಿದೆ. ವಿಶ್ವದಾದ್ಯಂತ 1500 ಕೋಟಿ ರೂಪಾಯಿಗಳ ಗಡಿ ದಾಟಿರುವ ಚಿತ್ರ ಇದೀಗ 2000 ಕೋಟಿ ಕ್ಲಬ್ ಸೇರುವ ಗುರಿ ಹೊಂದಿದೆ. ಆದರೆ ಈ ಮೈಲಿಗಲ್ಲು ತಲುಪುವುದು ಅಂದುಕೊಂಡಷ್ಟು ಸುಲಭವಲ್ಲ ಎಂಬ ಲೆಕ್ಕಾಚಾರವೂ ಶುರುವಾಗಿದೆ.
ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರ ಹಿಂದಿ ಮಾರುಕಟ್ಟೆಯಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಆದರೆ ದಕ್ಷಿಣ ಭಾರತದ ಕೆಲವು ಭಾಷೆಗಳಲ್ಲಿ ಕಲೆಕ್ಷನ್ ವೇಗ ಸ್ವಲ್ಪ ಕಡಿಮೆಯಾಗಿದೆ. ವಿಶೇಷವಾಗಿ ತೆಲುಗು ಮಾರುಕಟ್ಟೆಯಲ್ಲಿ ನಿರೀಕ್ಷಿತ ವೇಗ ಕಾಣುತ್ತಿಲ್ಲ. ಮತ್ತೊಂದೆಡೆ, ಕೇರಳದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
14ನೇ ದಿನದಂದು ಸಿನಿಮಾ ದೇಶಾದ್ಯಂತ 23.20 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರಲ್ಲಿ ಹಿಂದಿ ಭಾಷೆಯಿಂದ 16.50 ಕೋಟಿ ರೂಪಾಯಿ ಬಂದಿದ್ದರೆ, ಮಲಯಾಳಂನಲ್ಲಿ 2.15 ಕೋಟಿ, ಕನ್ನಡದಲ್ಲಿ 1.65 ಕೋಟಿ, ತಮಿಳಿನಲ್ಲಿ 1.60 ಕೋಟಿ ಹಾಗೂ ತೆಲುಗಿನಲ್ಲಿ 1.30 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದರೊಂದಿಗೆ ಭಾರತದ ಒಟ್ಟು ಗ್ರಾಸ್ ಕಲೆಕ್ಷನ್ 1009.05 ಕೋಟಿ ರೂಪಾಯಿಗೆ ತಲುಪಿದೆ.
ವಿದೇಶಿ ಮಾರುಕಟ್ಟೆಯಲ್ಲೂ ಚಿತ್ರದ ಗಳಿಕೆ ಮುಂದುವರಿದಿದೆ. 14ನೇ ದಿನ ವಿದೇಶದಲ್ಲಿ 8 ಕೋಟಿ ರೂಪಾಯಿ ಸಂಗ್ರಹವಾಗಿದ್ದು, ಒಟ್ಟು ವಿದೇಶಿ ಗ್ರಾಸ್ ಕಲೆಕ್ಷನ್ 510 ಕೋಟಿ ರೂಪಾಯಿಯಾಗಿದೆ. ಹೀಗಾಗಿ ವಿಶ್ವದಾದ್ಯಂತ ಚಿತ್ರದ ಒಟ್ಟು ಗ್ರಾಸ್ ಗಳಿಕೆ 1519.05 ಕೋಟಿ ರೂಪಾಯಿ ತಲುಪಿದೆ.
ಹೊಸ ರಾಷ್ಟ್ರಗಳಲ್ಲೂ ಸಿನಿಮಾ ಬಿಡುಗಡೆಯಾಗುತ್ತಿರುವುದು ವಿದೇಶಿ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿದೆ. ಆದರೆ ಸದ್ಯದ ಬಾಕ್ಸ್ ಆಫೀಸ್ ಲೆಕ್ಕಾಚಾರದ ಪ್ರಕಾರ 2000 ಕೋಟಿ ರೂಪಾಯಿ ಗಡಿ ತಲುಪುವುದು ಸುಲಭವಲ್ಲ. ಆದರೂ ಈ ಗುರಿ ಅಸಾಧ್ಯವೇನಲ್ಲ ಎಂಬ ನಿರೀಕ್ಷೆ ಚಿತ್ರತಂಡದಲ್ಲಿದೆ. ನಿರ್ಮಾಪಕರ ಪಾಲಿಗೆ ಸಿನಿಮಾ ಈಗಾಗಲೇ ಸುರಕ್ಷಿತ ವಲಯ ತಲುಪಿದೆ ಎನ್ನಲಾಗಿದೆ.
ನಮಿತ್ ಮಲ್ಹೋತ್ರಾ ಮತ್ತು ಯಶ್ ಬಂಡವಾಳ ಹೂಡಿರುವ ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಯಶ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೊದಲ ಭಾಗದ ಯಶಸ್ಸು ಇದೀಗ ಎರಡನೇ ಭಾಗದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಎರಡನೇ ಭಾಗ 2028ರ ದೀಪಾವಳಿಗೆ ತೆರೆಗೆ ಬರಲಿದೆ.




