Kannada NewsKarnataka NewsLatest

*ಬಸವ ಮಂಟಪ ಪುಸ್ತಕ ವಿವಾದ*: *ಲೇಖಕ ರವಿ ಹಂಜ್ ವಿರುದ್ಧ ದೂರು ದಾಖಲು*; *ಪುಸ್ತಕ ಸುಟ್ಟುಹಾಕಿ ಆಕ್ರೋಶ*

‘ಪ್ರಗತಿವಾಹಿನಿ ಸುದ್ದಿ: ಬಸವ ಮಂಟಪ’ ಪುಸ್ತಕದಲ್ಲಿ ಬಸವಣ್ಣನವರಿಗೆ ಅವಮಾನ ಮಾಡಿದ ಆರೋಪ ಕೇಳಿಬಂದಿದ್ದು, ಲೇಖಕ ರವಿ ಹಂಜ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಾಸಕ ಬಿ.ಆರ್.ಪಾಟೀಲ್ ನೇತೃತ್ವದ ಬಸವಣ್ಣ ಅನುಯಾಯಿಗಳ ನಿಯೋಗ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದೆ. ಲೇಖಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಮತ್ತೊಂದೆಡೆ ಬೆಂಗಳೂರಿನ ಬಸವ ಸಮಿತಿ ಆವರಣದಲ್ಲಿ ಬಸವ ಮಂಟಪ ಪುಸ್ತಕ ಸುಟ್ಟು ಆಕ್ರೋಶ ವ್ಯಕ್ತಪಡಿಸಿರುವ ಘಟನೆಯೂ ನಡೆದಿದೆ. ಲೇಖಕ ರವಿ ಹಂಜ್​​ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿರುವ ಬಸವಣ್ಣನವರ ಅನುಯಾಯಿಗಳು, ಪುಸ್ತಕದಲ್ಲಿ ಆಕ್ಷೇಪಾರ್ಹ ಅಂಶ ದಾಖಲಾಗಿದೆ. ಹೀಗಾಗಿ ಪುಸ್ತಕ ನಿಷೇಧಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

‘ಬಸವ ಮಂಟಪ’ ಪುಸ್ತಕದಲ್ಲಿ ಬಸವಣ್ಣ ಅವರಿಗೆ ಅಪಮಾನ ಮಾಡಲಾಗಿದ್ದು, ರಾಜ್ಯಾದ್ಯಂತ ಬಸವ ಬೆಂಬಲಿಗರಿಗೆ ನೋವಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸಚಿವ ಶರಣಪ್ರಕಾಶ್ ಅವರೊಂದಿಗೆ ಜಂಟಿ ಸಿದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಬಸವಣ್ಣನವರ ಘನತೆಗೆ ಧಕ್ಕೆ ತರುವ ಪ್ರಯತ್ನ ಎಂದಿದ್ದಾರೆ. ಬಸವಣ್ಣನವರು ಕೇವಲ ಲಿಂಗಾಯತ ಸಮುದಾಯಕ್ಕೆ ಸೀಮಿತರಲ್ಲ, ಮನುಷ್ಯತ್ವವೇ ಧರ್ಮ ಎಂದು ಸಾರಿದವರು. ಸಂಕವ್ವ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ ಮುಂತಾದ ಎಲ್ಲಾ ಸಮುದಾಯದವರಿಗೂ ಅನುಭವ ಮಂಟಪದಲ್ಲಿ ಸ್ಥಾನ ನೀಡಿದವರು. ಅಂತಹ ಮಹಾನ್ ವ್ಯಕ್ತಿಯನ್ನು ಕೊಲೆಗಡುಕ, ಲೂಟಿಕೋರ ಎಂದು ಬಿಂಬಿಸುತ್ತಿರುವುದನ್ನು ಒಪ್ಪಲಾಗದು ಎಂದು ಸಚಿವರು ಕಿಡಿ ಕಾರಿದ್ದಾರೆ. ಇದೆಲ್ಲದರ ಹಿಂದೆ ಹಿರಿಯ ಪತ್ರಕರ್ತ ವಿಶ್ವೇಶ್ವರ್​​ ಭಟ್​​ ಇರೋದಾಗಿಯೂ ಅವರು ಆರೋಪಿಸಿದ್ದಾರೆ.

ರವಿ ಹಂಜ್‌ ಒಬ್ಬ ಕ್ರಿಮಿನಲ್‌ ಆಗಿದ್ದು, ಬಸವಣ್ಣರನ್ನು ಕೂಡ ಕ್ರಿಮಿನಲ್ ಎಂದು ಬಿಂಬಿಸಲು ಹೊರಟಿದ್ದಾರೆ. ಬಸವಣ್ಣರ ವಚನ ತಿರುಚಲು ಯತ್ನಿಸಿದ್ದಾರೆ. ಈ ಬಗ್ಗೆ ಸಿಎಂ ಗಮನಕ್ಕೆ ತಂದು ಕಾನೂನು ತಜ್ಞರು ಜತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಬಸವ ಸಂಸ್ಕೃತಿ ಮೇಲೆ ದಾಳಿ ಮಾಡಿದ್ರೆ ನಾವು ಸುಮ್ಮನಿರಲ್ಲ. ಈ ಕಾರ್ಯಕ್ರಮದಲ್ಲಿ ಶಂಕರ ಬಿದರಿ ಹಾಗೂ ಮನು ಬಳಿಗಾರ್ ಚಪ್ಪಾಳೆ ಹೊಡೆದಿದ್ದಾರೆ. ಇವರು ಆಧುನಿಕ ಕೊಂಡಿ ಮಂಚಣ್ಣನಂತವರು ಎಂದು ಸಚಿವರು ವಾಗ್ದಾಳಿ ನಡೆಸಿದ್ದಾರೆ.

Related Articles

Back to top button