Kannada NewsKarnataka NewsLatestPolitics

*ಖಾಸಗಿ ಬೈಕ್‌ಗಳಿಗೂ ಬೈಕ್ ಟ್ಯಾಕ್ಸಿ ಸೇವೆಗೆ ಅವಕಾಶ ನೀಡಿ*: *ರಾಜ್ಯಗಳಿಗೆ ನಿತಿನ್ ಗಡ್ಕರಿ ಪತ್ರ*

ಪ್ರಗತಿವಾಹಿನಿ ಸುದ್ದಿ: ಖಾಸಗಿ ಬೈಕ್‌ಗಳನ್ನು ಬಳಸಿಕೊಂಡು ಬೈಕ್ ಟ್ಯಾಕ್ಸಿ ಸೇವೆ ನೀಡಲು ದೇಶಾದ್ಯಂತ ಅವಕಾಶ ಕಲ್ಪಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ. ಕೇಂದ್ರದ ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿ 2025ರ ಅಡಿಯಲ್ಲಿ ಸಾರಿಗೆಯೇತರ ದ್ವಿಚಕ್ರ ವಾಹನಗಳಿಗೂ ಅಗ್ರಿಗೇಟರ್ ಆ್ಯಪ್‌ಗಳ ಮೂಲಕ ಪ್ರಯಾಣಿಕರನ್ನು ಕರೆದೊಯ್ಯಲು ಅನುಮತಿ ನೀಡಬೇಕು ಎಂಬುದು ಅವರ ಒತ್ತಾಯವಾಗಿದೆ. ಈ ಕ್ರಮದಿಂದ ದೇಶದಲ್ಲಿ 15ರಿಂದ 20 ಕೋಟಿ ಜನರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯಲ್ಲಿ ನಡೆದ ‘ರೈಡ್: ಅಗ್ರಿಗೇಟರ್ ಮತ್ತು ಡೆಲಿವರಿ ಸೇವೆಗಳ ಪ್ರದರ್ಶನ’ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ಎಲ್ಲಾ ರಾಜ್ಯಗಳ ಸಾರಿಗೆ ಆಯುಕ್ತರ ಸಭೆ ಕರೆದು ಖಾಸಗಿ ಬೈಕ್‌ಗಳಿಗೆ ಬೈಕ್ ಟ್ಯಾಕ್ಸಿ ಸೇವೆ ಒದಗಿಸಲು ಅವಕಾಶ ನೀಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರಗಳಿಗೂ ಅಧಿಕೃತವಾಗಿ ಪತ್ರ ಬರೆದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಕಾನೂನಿನ ಅಸ್ಪಷ್ಟತೆಯಿಂದಾಗಿ ಹಲವು ರಾಜ್ಯಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದ ರ‍್ಯಾಪಿಡೋ ಮತ್ತು ಉಬರ್‌ನಂತಹ ಬೈಕ್ ಟ್ಯಾಕ್ಸಿ ಕಂಪನಿಗಳಿಗೆ ಈ ಮಾರ್ಗಸೂಚಿ ಮಹತ್ವದ್ದಾಗಿದೆ. ವಿಶೇಷವಾಗಿ ಬೈಕ್ ಟ್ಯಾಕ್ಸಿ ಸೇವೆ ವಿಚಾರವಾಗಿ ನಿಷೇಧ ಮತ್ತು ಪ್ರತಿಭಟನೆಗಳನ್ನು ಕಂಡಿರುವ ಕರ್ನಾಟಕದಲ್ಲೂ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

ಕೇಂದ್ರದ ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿ 2025ರ ಪ್ರಕಾರ, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 67ರ ಉಪವಿಭಾಗ (3)ರ ಅಡಿಯಲ್ಲಿ ರಾಜ್ಯ ಸರ್ಕಾರಗಳು ತಮ್ಮ ಅಧಿಕಾರ ಬಳಸಿಕೊಂಡು ಖಾಸಗಿ ಬೈಕ್‌ಗಳನ್ನು ಪ್ರಯಾಣಿಕರ ಸಾರಿಗೆಗೆ ಬಳಸಲು ಅನುಮತಿ ನೀಡಬಹುದು.

ದೇಶದಲ್ಲಿ ಬೈಕ್ ಶೇರಿಂಗ್, ಎಲೆಕ್ಟ್ರಿಕ್ ವಾಹನಗಳು ಮತ್ತು ಆಟೋ ರಿಕ್ಷಾ ಸೇವೆಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 2020ರ ಹಿಂದಿನ ಮಾರ್ಗಸೂಚಿಯನ್ನು ಪರಿಷ್ಕರಿಸಿ 2025ರ ಹೊಸ ಮಾರ್ಗಸೂಚಿ ಜಾರಿಗೆ ತರಲಾಗಿದೆ. ಪ್ರಯಾಣಿಕರ ಸುರಕ್ಷತೆ, ಚಾಲಕರ ಕಲ್ಯಾಣ ಮತ್ತು ಸರಳ ನಿಯಂತ್ರಣ ವ್ಯವಸ್ಥೆ ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

ಆದರೆ, ಖಾಸಗಿ ಬೈಕ್‌ಗಳಿಗೆ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಲು ಆಯಾ ರಾಜ್ಯ ಸರ್ಕಾರಗಳ ಅನುಮತಿ ಅಗತ್ಯವಾಗಿದೆ. ಹೀಗಾಗಿ ಕೇಂದ್ರದ ಮನವಿಗೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ಯಾವ ನಿರ್ಧಾರ ಕೈಗೊಳ್ಳಲಿವೆ ಎಂಬುದರ ಮೇಲೆ ಮುಂದಿನ ಬೆಳವಣಿಗೆ ಅವಲಂಬಿತವಾಗಿದೆ.

Related Articles

Back to top button