Kannada NewsKarnataka NewsLatestNational

*ಹವಾಲಾ ಆರೋಪಿಯ ಮನೆ ಎಂದುಕೊಂಡು ಬೇರೊಂದು ಮನೆಗೆ ED ದಾಳಿ*: *4 ಗಂಟೆ ಶೋಧ ನಡೆಸಿ ಅಧಿಕಾರಿಗಳು ಮಾಡಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಹವಾಲಾ ಪ್ರಕರಣದ ತನಿಖೆ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಳಾಸವೊಂದನ್ನು ತಪ್ಪಾಗಿ ಗುರುತಿಸಿ ಬೇರೊಬ್ಬರ ಮನೆಗೆ ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಸುಮಾರು 100 ಕೋಟಿ ರೂಪಾಯಿ ಶಂಕಿತ ಹವಾಲಾ ವಹಿವಾಟಿಗೆ ಸಂಬಂಧಿಸಿದ ಆರೋಪಿಯ ಹುಡುಕಾಟದಲ್ಲಿದ್ದ ಅಧಿಕಾರಿಗಳು, ತಪ್ಪು ಮನೆಗೆ ತೆರಳಿ ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಶೋಧ ನಡೆಸಿದ್ದಾರೆ. ಮನೆಯವರು ಇದು ತಪ್ಪು ವಿಳಾಸ ಎಂದು ತಿಳಿಸಿದರೂ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ ಎನ್ನಲಾಗಿದೆ. ಕೊನೆಯಲ್ಲಿ ತಾವು ಹುಡುಕುತ್ತಿದ್ದ ವ್ಯಕ್ತಿಯ ಫೋಟೋ ತೋರಿಸಿದಾಗ ಕುಟುಂಬಸ್ಥರಿಗೆ ಅಧಿಕಾರಿಗಳು ಮಾಡಿದ ತಪ್ಪು ಅರಿವಾಗಿದೆ.

ಈ ಘಟನೆ ನವೆಂಬರ್ 20ರಂದು ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಡೆದಿದೆ. ನೌಶಾದ್ ಎಂಬುವವರ ಮನೆಗೆ ಶುಕ್ರವಾರ ಬೆಳಗ್ಗೆ ಸುಮಾರು 7 ಗಂಟೆಗೆ ಇಡಿ ಅಧಿಕಾರಿಗಳು ಆಗಮಿಸಿದ್ದರು. 100 ಕೋಟಿ ರೂಪಾಯಿ ಹವಾಲಾ ವಹಿವಾಟಿಗೆ ಸಂಬಂಧಿಸಿದ ನೌಶಾದ್ ಎಂಬ ಆರೋಪಿಯನ್ನು ಹುಡುಕುತ್ತಿರುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದಾರೆ.

ಆದರೆ, ಮನೆಯವರ ವಿವರಗಳು ಅಧಿಕಾರಿಗಳು ಹುಡುಕುತ್ತಿದ್ದ ವ್ಯಕ್ತಿಯ ವಿವರಗಳಿಗೆ ಹೊಂದಿಕೆಯಾಗಿರಲಿಲ್ಲ. ನೌಶಾದ್ ಅವರ ತಂದೆಯ ಹೆಸರು ಉಸ್ಮಾನ್ ಅಲ್ಲ, ಮೊಹಮ್ಮದ್ ಎಂದು ಕುಟುಂಬಸ್ಥರು ಸ್ಪಷ್ಟಪಡಿಸಿದ್ದಾರೆ. ಆದರೂ ಅಧಿಕಾರಿಗಳು ಮನೆಗೆ ಶೋಧ ನಡೆಸಲು ಮುಂದಾಗಿದ್ದು, ಕುಟುಂಬದವರು ಅದಕ್ಕೆ ಅವಕಾಶ ನೀಡಿದ್ದಾರೆ. ನಾಲ್ಕು ಗಂಟೆಗಳ ಹುಡುಕಾಟದ ಬಳಿಕವೂ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಶೋಧ ಕಾರ್ಯಾಚರಣೆಯ ಕೊನೆಯಲ್ಲಿ ಅಧಿಕಾರಿಗಳು ತಾವು ಹುಡುಕುತ್ತಿದ್ದ ವ್ಯಕ್ತಿಯ ಫೋಟೋ ತೋರಿಸಿದ್ದಾರೆ. ಆದರೆ ಆ ಫೋಟೋದಲ್ಲಿದ್ದ ವ್ಯಕ್ತಿ ತಮ್ಮ ಮನೆಯಲ್ಲಿ ವಾಸಿಸುವ ನೌಶಾದ್ ಅಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.

ನೌಶಾದ್ ಈ ಹಿಂದೆ ಶಾರ್ಜಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಕೆಲಸ ತೊರೆದು ಒಂಬತ್ತು ತಿಂಗಳ ಹಿಂದೆ ಕೇರಳಕ್ಕೆ ಮರಳಿದ್ದರು. ಸದ್ಯ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ವಿದೇಶಿ ವಿನಿಮಯ ಉಲ್ಲಂಘನೆ ಮತ್ತು ಹವಾಲಾ ವಹಿವಾಟುಗಳ ತನಿಖೆಯ ಭಾಗವಾಗಿ ಶುಕ್ರವಾರ ರಾಜ್ಯಾದ್ಯಂತ ಸುಮಾರು 12 ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಈ ಕಾರ್ಯಾಚರಣೆ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಪ್ಪು ವಿಳಾಸಕ್ಕೆ ಬಂದು ಶೋಧ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೌಶಾದ್ ಕುಟುಂಬ ಒತ್ತಾಯಿಸಿದೆ. ದಾಳಿ ನಡೆಸುವ ಮೊದಲು ವಿಳಾಸ ಮತ್ತು ಇತರ ಗುರುತಿನ ವಿವರಗಳನ್ನು ಸರಿಯಾಗಿ ಪರಿಶೀಲಿಸಬೇಕಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಕುಟುಂಬದ ಆರೋಪಗಳಿಗೆ ಇಡಿ ಅಧಿಕಾರಿಗಳು ಈವರೆಗೆ ಪ್ರತಿಕ್ರಿಯಿಸಿಲ್ಲ.

Related Articles

Back to top button