Film & EntertainmentKannada NewsKarnataka NewsLatest

*ಮದುವೆಯ ಸಂಭ್ರಮದಲ್ಲಿ ಸಿಬ್ಬಂದಿಗೆ ಕಾವ್ಯಾ ಮಾರನ್ ಭರ್ಜರಿ ಗಿಫ್ಟ್*: *ಉಡುಗೊರೆ ಕಂಡು ಖುಷಿಯಾದ ಉದ್ಯೋಗಿಗಳು*

ಪ್ರಗತಿವಾಹಿನಿ ಸುದ್ದಿ: ಉದ್ಯಮ ಕ್ಷೇತ್ರದ ಯುವ ತಾರೆ ಕಾವ್ಯಾ ಮಾರನ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಮದುವೆಯ ಸಂಭ್ರಮ ಇದೀಗ ಸನ್ ಗ್ರೂಪ್ ಉದ್ಯೋಗಿಗಳಿಗೂ ತಲುಪಿದೆ. ತಮ್ಮ ಜೀವನದ ವಿಶೇಷ ಕ್ಷಣವನ್ನು ಸಿಬ್ಬಂದಿಯೊಂದಿಗೂ ಹಂಚಿಕೊಳ್ಳಲು ನವವಿವಾಹಿತರು ದುಬಾರಿ ಉಡುಗೊರೆ ನೀಡಿದ್ದಾರೆ.

ಮದುವೆಯ ಆಮಂತ್ರಣದ ಜೊತೆಗೆ ಚಿನ್ನದ ಉಂಗುರ ಮತ್ತು ಸಿಹಿತಿಂಡಿಗಳ ಬಾಕ್ಸ್ ಪಡೆದ ಉದ್ಯೋಗಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈ ಉಡುಗೊರೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾವ್ಯಾ ಮಾರನ್ ಅವರ ಕೊಡುಗೆ ಇದೀಗ ಚರ್ಚೆಗೆ ಕಾರಣವಾಗಿದೆ.

ಸನ್ ನೆಟ್‌ವರ್ಕ್ಸ್ ಉದ್ಯೋಗಿಯೊಬ್ಬರು ತಮಗೆ ದೊರೆತ ಮದುವೆಯ ಉಡುಗೊರೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕಾವ್ಯಾ ಮತ್ತು ಅನಿರುದ್ಧ್ ಅವರ ಮದುವೆ ಆರತಕ್ಷತೆಯ ಆಮಂತ್ರಣದ ಜೊತೆಗೆ ಸ್ವೀಟ್ ಬಾಕ್ಸ್ ಹಾಗೂ ಚಿನ್ನದ ಉಂಗುರ ನೀಡಿರುವುದನ್ನು ತೋರಿಸಿದ್ದಾರೆ. ಅಷ್ಟೇ ಅಲ್ಲ, ವಿವಿಧ ಕಚೇರಿಗಳಲ್ಲಿಯೇ ಸಿಬ್ಬಂದಿಗಾಗಿ ಭರ್ಜರಿ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಉಡುಗೊರೆ ಪಡೆದ ಉದ್ಯೋಗಿಗಳು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಕಾವ್ಯಾ ಮಾರನ್ ಮತ್ತು ಅನಿರುದ್ಧ್ ರವಿಚಂದರ್ ಅವರು 2026ರ ನವೆಂಬರ್ 11ರಂದು ಗ್ರೀಸ್‌ನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಆಪ್ತ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಿದ್ದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಸೂಪರ್‌ಸ್ಟಾರ್ ರಜನಿಕಾಂತ್ ಪ್ರಮುಖ ಅತಿಥಿಗಳಾಗಿದ್ದರು.

ಗ್ರೀಸ್‌ನಲ್ಲಿ ಮದುವೆಯಾದ ಬಳಿಕ ಭಾರತಕ್ಕೆ ಮರಳಿರುವ ನವದಂಪತಿ ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ಆಯೋಜಿಸಲು ಸಿದ್ಧತೆ ನಡೆಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ‘ಜವಾನ್’, ‘ಲಿಯೋ’, ‘ಜೈಲರ್’ ಮತ್ತು ‘ವಿಕ್ರಮ್’ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.

ಇನ್ನು ಕಾವ್ಯಾ ಮಾರನ್ ಅವರು ಖ್ಯಾತ ಉದ್ಯಮಿ ಕಲಾನಿಧಿ ಮಾರನ್ ಅವರ ಪುತ್ರಿ. ಸನ್ ನೆಟ್‌ವರ್ಕ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹ-ಮಾಲಕಿಯಾಗಿ ಗುರುತಿಸಿಕೊಂಡಿದ್ದಾರೆ. ಮದುವೆಯ ಖುಷಿಯಲ್ಲಿ ಉದ್ಯೋಗಿಗಳಿಗೆ ಚಿನ್ನದ ಉಂಗುರ ನೀಡಿರುವುದು ಇದೀಗ ವಿಶೇಷ ಗಮನ ಸೆಳೆದಿದೆ.


Related Articles

Back to top button