*ಶಾಲಾ ಮಕ್ಕಳ ಶೂ, ಸಾಕ್ಸ್, ಪಠ್ಯಪುಸ್ತಕ ವಿಳಂಬದ ಬಗ್ಗೆ ಮನವಿ ಮಾಡಿದ್ದಕ್ಕೆ ದರ್ಪ ಮೆರೆದ್ರಾ ಶಿಕ್ಷಣ ಸಚಿವ ಮಧು ಬಂಗಾರಪ್ಪ?*

ಪ್ರಗತಿವಾಹಿನಿ ಸುದ್ದಿ: ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಹಾಗೂ ಪಠ್ಯಪುಸ್ತಕ ವಿತರಣೆ ವಿಳಂಬ ಕುರಿತು ಮನವಿ ಸಲ್ಲಿಸಲು ಬಂದವರೊಂದಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚಿವರ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯಲ್ಲಿ 21,964 ಮಕ್ಕಳಿಗೆ ಇನ್ನೂ ಶೂ ಮತ್ತು ಸಾಕ್ಸ್ ತಲುಪಿಲ್ಲ ಹಾಗೂ 64,000ಕ್ಕೂ ಹೆಚ್ಚು ಮಕ್ಕಳಿಗೆ ಎರಡನೇ ಸೆಮಿಸ್ಟರ್ ಪಠ್ಯಪುಸ್ತಕಗಳು ಬಂದಿಲ್ಲ ಎಂದು ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ದೇವರಾಜ್ ಕಿನ್ನಾಳ್ ಅವರು ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಸಚಿವರು ಕಿನ್ನಾಳ್ ಅವರಿಗೆ ‘‘ಕೇಳುವ ಯೋಗ್ಯತೆ ಇಲ್ಲ ಅಂದ್ರೆ ಸುಮ್ಮನಿರಿ’’ ಎಂದು ಗರಂ ಆಗಿ ಮಾತನಾಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಇದ್ದದ್ದು ಇದ್ದಂಗೆ ಹೇಳಿದರೆ ಎದ್ದುಬಂದು ಎದಗೆ ಒದ್ದರಂತೆ ಹಾಗಿದೆ ಸಚಿವ ಮಧುಬಂಗಾರಪ್ಪ ನಡೆ. ಒಬ್ಬ ಶಿಕ್ಷಣ ಸಚಿವರಾಗಿ ಈ ರೀತಿ ಮಾತುಗಳನ್ನಾಡಿ ನಡೆದುಕೊಂಡದ್ದನ್ನು ಯಾರೂ ಕ್ಷಮಿಸಲ್ಲ. ಇದು ಖಂಡನೀಯ ಎಂದು ಗುಡುಗಿದ್ದಾರೆ. ಶಿಕ್ಷಣ ಸಚಿವರು ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಶೂ, ಸಾಕ್ಸ್, ಪಠ್ಯಪುಸ್ತಕ ವಿಳಂಬದ ಬಗ್ಗೆ ಶಿಕ್ಷಣ ಸಚಿವರನ್ನು ಕೇಳಿದ್ದಕ್ಕೆ ಅವರು ನಡೆದುಕೊಂಡ ರೀತಿ ಭಾರಿ ಚರ್ಚೆಗೆ ಕಾರಣವಗಿದೆ.



