*ಶಬರಿಮಲೆ ಯಾತ್ರಾರ್ಥಿಗಳಿಗೆ ವಾರ್ನಿಂಗ್*: *ಪಂಪಾ ನದಿಯ ವಿಚಾರದಲ್ಲಿ ಜಿಲ್ಲಾಡಳಿತದ ಹೊಸ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುವ ಭಕ್ತರು ಇನ್ಮುಂದೆ ಪಂಪಾ ನದಿಯ ಸ್ವಚ್ಛತೆಯ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿದೆ. ಪವಿತ್ರ ನದಿಗೆ ಬಟ್ಟೆ ಎಸೆಯುವುದು ಅಥವಾ ಯಾವುದೇ ರೀತಿಯ ತ್ಯಾಜ್ಯ ಹಾಕಿ ಕಲುಷಿತಗೊಳಿಸುವುದು ಕಂಡುಬಂದರೆ ಗರಿಷ್ಠ 5,000 ರೂಪಾಯಿ ದಂಡ ವಿಧಿಸುವುದಾಗಿ ಜಿಲ್ಲಾಡಳಿತ ಎಚ್ಚರಿಸಿದೆ. ಮಕರವಿಳಕ್ಕು ಉತ್ಸವದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ನದಿಯ ಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಪ್ರತಿ ವರ್ಷ ಡಿಸೆಂಬರ್ ಮತ್ತು ಜನವರಿಯಲ್ಲಿ ನಡೆಯುವ ಮಕರವಿಳಕ್ಕು ಉತ್ಸವದ ವೇಳೆ ಲಕ್ಷಾಂತರ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಾರೆ. ಯಾತ್ರೆಯ ಭಾಗವಾಗಿ ಪವಿತ್ರ ಪಂಪಾ ನದಿಯಲ್ಲಿ ಸ್ನಾನ ಮಾಡುವುದು ಸಂಪ್ರದಾಯವಾಗಿದೆ. ಆದರೆ ಸ್ನಾನದ ಬಳಿಕ ಅನೇಕ ಭಕ್ತರು ತಾವು ಧರಿಸಿದ್ದ ಒದ್ದೆ ಬಟ್ಟೆಗಳನ್ನು ನದಿಯಲ್ಲೇ ಬಿಟ್ಟು ಹೋಗುತ್ತಿದ್ದಾರೆ. ಇದರಿಂದ ನದಿಯಲ್ಲಿ ಮಾಲಿನ್ಯ ಹೆಚ್ಚಾಗುತ್ತಿದೆ. ಉತ್ಸವದ ಅವಧಿಯಲ್ಲಿ ಪ್ರತಿದಿನ ಹಲವು ಟನ್‌ಗಳಷ್ಟು ಬಟ್ಟೆಗಳನ್ನು ನದಿಗೆ ಎಸೆಯಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಪಂಪಾ ನದಿಗೆ ಬಟ್ಟೆ ಎಸೆದರೆ ₹5,000 ದಂಡ
ನದಿಯ ಪಾವಿತ್ರ್ಯ ಮತ್ತು ಸ್ವಚ್ಛತೆಯನ್ನು ಕಾಪಾಡುವ ಉದ್ದೇಶದಿಂದ ಜಿಲ್ಲಾಡಳಿತ ಹೊಸ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಪಂಪಾ ನದಿಗೆ ಬಟ್ಟೆ ಅಥವಾ ಇತರ ತ್ಯಾಜ್ಯಗಳನ್ನು ಎಸೆಯುವುದು ಹಾಗೂ ನದಿಯನ್ನು ಕಲುಷಿತಗೊಳಿಸುವುದು ಕಂಡುಬಂದರೆ ಸ್ಥಳದಲ್ಲೇ ಗರಿಷ್ಠ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಸೆಕ್ಷನ್ 163 ಹಾಗೂ ಕೇರಳ ಪಂಚಾಯತ್ ರಾಜ್ ಕಾಯ್ದೆ, 1994ರ ಸೆಕ್ಷನ್ 219N(1) ಮತ್ತು (3)ರ ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ. ವಿಧಿಸಿದ ದಂಡವನ್ನು 15 ದಿನಗಳೊಳಗೆ ಪಾವತಿಸದಿದ್ದರೆ ಹೆಚ್ಚುವರಿ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಜಿಲ್ಲಾಡಳಿತ ಎಚ್ಚರಿಸಿದೆ.
ಇದೇ ವಿಚಾರವಾಗಿ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಭಕ್ತರಿಗೆ ಮನವಿ ಮಾಡಿದ್ದಾರೆ. ಪವಿತ್ರ ಪಂಪಾ ನದಿಗೆ ಬಟ್ಟೆ, ಪ್ಲಾಸ್ಟಿಕ್ ಅಥವಾ ಯಾವುದೇ ರೀತಿಯ ತ್ಯಾಜ್ಯ ಎಸೆಯಬಾರದು. ಮುಂದಿನ ಪೀಳಿಗೆಗಾಗಿ ನದಿಯ ಪಾವಿತ್ರ್ಯ ಮತ್ತು ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಕರೆ ನೀಡಿದ್ದಾರೆ.




