*ದೇಶದ ಮೊದಲ ಹಸಿರು ಡೇಟಾ ಸೆಂಟರ್*: *49 ಎಕರೆ ಜಾಗದಲ್ಲಿ ಬೃಹತ್ ಯೋಜನೆಗೆ ಸಿದ್ಧತೆ*

ಪ್ರಗತಿವಾಹಿನಿ ಸುದ್ದಿ: ಕರಾವಳಿ ಕರ್ನಾಟಕದ ತಂತ್ರಜ್ಞಾನ ವಲಯದಲ್ಲಿ ಹೊಸ ಅಧ್ಯಾಯ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ. ದೇಶದ ಮೊದಲ ಸಸ್ಟೈನಬಲ್ ಡೇಟಾ ಸೆಂಟರ್ ಸ್ಥಾಪನೆಗೆ ಮಂಗಳೂರಿನಲ್ಲಿ ಸಿದ್ಧತೆ ನಡೆದಿದೆ. ಇದಕ್ಕಾಗಿ ತಣ್ಣೀರುಬಾವಿಯಲ್ಲಿರುವ ವಿಶಾಲ ಜಾಗವನ್ನು ಸರ್ಕಾರ ಗುರುತಿಸಿದೆ. ಯೋಜನೆಯ ಸ್ಥಳಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಖಾಸಗಿ ಹೂಡಿಕೆದಾರರನ್ನು ಆಕರ್ಷಿಸಲು ಸರ್ಕಾರ ಶೀಘ್ರದಲ್ಲೇ ಮಹತ್ವದ ಹೆಜ್ಜೆ ಇಡುವುದಾಗಿ ಘೋಷಿಸಿದ್ದಾರೆ.
ನವೆಂಬರ್ 25ರಂದು ಮಂಗಳೂರಿನ ತಣ್ಣೀರುಬಾವಿ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಉದ್ದೇಶಿತ ಡೇಟಾ ಸೆಂಟರ್ ಯೋಜನೆಗೆ ಗುರುತಿಸಲಾಗಿರುವ ಜಾಗವನ್ನು ಖುದ್ದಾಗಿ ಪರಿಶೀಲಿಸಿದರು.
ಬಳಿಕ ಮಾತನಾಡಿದ ಅವರು, ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ‘ಸಸ್ಟೈನಬಲ್ ಡೇಟಾ ಸೆಂಟರ್ ನೀತಿ’ ಜಾರಿಗೆ ತರಲಾಗಿದೆ ಎಂದು ತಿಳಿಸಿದರು. ತಣ್ಣೀರುಬಾವಿಯಲ್ಲಿ ಸುಮಾರು 49 ಎಕರೆ ಜಾಗವಿದ್ದು, ಕರಾವಳಿ ನಿಯಂತ್ರಣ ವಲಯದ (ಸಿಆರ್ಝಡ್) ನಿಯಮಗಳ ಪ್ರಕಾರ ಸುಮಾರು 20 ಎಕರೆ ಪ್ರದೇಶದಲ್ಲಿ ಶಾಶ್ವತ ಕಟ್ಟಡ ನಿರ್ಮಿಸಲು ಅವಕಾಶವಿದೆ ಎಂದರು.
ಈ ಜಾಗದ ಸಾಧಕ-ಬಾಧಕಗಳ ಕುರಿತು ವಿವಿಧ ತಾಂತ್ರಿಕ ಹಾಗೂ ಪರಿಸರ ಸಂಸ್ಥೆಗಳಿಂದ ಪರಿಶೀಲನೆ ನಡೆಸಲಾಗುತ್ತದೆ. ಯೋಜನೆಗೆ ಖಾಸಗಿ ಹೂಡಿಕೆದಾರರನ್ನು ಆಕರ್ಷಿಸುವ ಉದ್ದೇಶದಿಂದ ಸರ್ಕಾರ ಶೀಘ್ರದಲ್ಲೇ ಶ್ವೇತಪತ್ರ ಹೊರಡಿಸಲಿದೆ ಎಂದು ಸಚಿವರು ಘೋಷಿಸಿದರು.
ಮಂಗಳೂರು ಮಾತ್ರವಲ್ಲದೆ ಉಡುಪಿಯಲ್ಲೂ ಡೇಟಾ ಸೆಂಟರ್ ಸ್ಥಾಪನೆಗಾಗಿ ಜಾಗ ಗುರುತಿಸಲಾಗಿದೆ. ಆದರೆ, ಆ ಪ್ರದೇಶ ಅರಣ್ಯ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.
ಕರಾವಳಿ ಭಾಗದಲ್ಲಿ ಈಗಾಗಲೇ ಸುಮಾರು ₹5,000 ಕೋಟಿ ಮೌಲ್ಯದ ಐಟಿ ರಫ್ತು ನಡೆಯುತ್ತಿದೆ. ಮಂಗಳೂರು, ಮಣಿಪಾಲ ಮತ್ತು ಉಡುಪಿಯ ಭವಿಷ್ಯದ ತಂತ್ರಜ್ಞಾನ ಹಾಗೂ ಕೈಗಾರಿಕಾ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ‘ಬಿಯಾಂಡ್ ಬೆಂಗಳೂರು’ ಉಪಕ್ರಮದ ಅಡಿಯಲ್ಲಿ ಸಮಗ್ರ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ವಿವರಿಸಿದರು.
ಏನಿದು ಸಸ್ಟೈನಬಲ್ ಡೇಟಾ ಸೆಂಟರ್?
ಸಾಮಾನ್ಯ ಡೇಟಾ ಸೆಂಟರ್ಗಳು ಡಿಜಿಟಲ್ ಮಾಹಿತಿಯನ್ನು ಸಂಗ್ರಹಿಸುವ ಮತ್ತು ನಿರ್ವಹಿಸುವ ಕೇಂದ್ರಗಳಾಗಿವೆ. ಇವು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವುದರಿಂದ ಅಪಾರ ಪ್ರಮಾಣದ ವಿದ್ಯುತ್ ಬಳಕೆಯಾಗುತ್ತದೆ. ಸರ್ವರ್ಗಳನ್ನು ತಂಪಾಗಿಡಲು ಹೆಚ್ಚಿನ ಪ್ರಮಾಣದ ನೀರಿನ ಅಗತ್ಯವೂ ಇರುತ್ತದೆ. ಇದರಿಂದ ಪರಿಸರದ ಮೇಲೆ ಒತ್ತಡ ಹೆಚ್ಚಾಗುತ್ತದೆ.
ಆದರೆ ಸಸ್ಟೈನಬಲ್ ಡೇಟಾ ಸೆಂಟರ್ಗಳು ಸೌರಶಕ್ತಿ, ಪವನಶಕ್ತಿಯಂತಹ ನವೀಕರಿಸಬಹುದಾದ ಇಂಧನವನ್ನು ಬಳಸುತ್ತವೆ. ಕಡಿಮೆ ನೀರು ಬಳಕೆಯ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಇಂಧನ ದಕ್ಷ ಕೂಲಿಂಗ್ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುತ್ತವೆ. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಗುರಿಯೊಂದಿಗೆ ಕಾರ್ಯನಿರ್ವಹಿಸುವ ಇಂತಹ ಕೇಂದ್ರಗಳನ್ನು ಹಸಿರು ಡೇಟಾ ಸೆಂಟರ್ ಎಂದು ಕರೆಯಲಾಗುತ್ತದೆ.
ತಣ್ಣೀರುಬಾವಿಯಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬಂದರೆ, ಮಂಗಳೂರು ಮತ್ತು ಕರಾವಳಿ ಭಾಗದ ತಂತ್ರಜ್ಞಾನ ಹಾಗೂ ಕೈಗಾರಿಕಾ ಬೆಳವಣಿಗೆಗೆ ಹೊಸ ಅವಕಾಶಗಳು ತೆರೆದುಕೊಳ್ಳುವ ನಿರೀಕ್ಷೆಯಿದೆ. ಈಗ ಸರ್ಕಾರದ ಮುಂದಿನ ಹೆಜ್ಜೆ ಮತ್ತು ಹೂಡಿಕೆದಾರರ ಪ್ರತಿಕ್ರಿಯೆಯ ಮೇಲೆ ಎಲ್ಲರ ಗಮನ ನೆಟ್ಟಿದೆ.




