Kannada NewsKarnataka NewsLatest

*ವಿನಯ್ ಕುಲಕರ್ಣಿ ಪ್ರಕರಣ*: *ಹೈಕೋರ್ಟ್ ಜಾಮೀನು ರದ್ದುಪಡಿಸಲು ಸುಪ್ರೀಂಕೋರ್ಟ್ ನೀಡಿದ ಕಾರಣಗಳೇನು?*

ಪ್ರಗತಿವಾಹಿನಿ ಸುದ್ದಿ: ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಅಷ್ಟೇ ಅಲ್ಲ, ಎರಡು ವಾರಗಳೊಳಗೆ ಶರಣಾಗುವಂತೆ ಖಡಕ್ ಆದೇಶ ನೀಡಿದೆ. ಸುಪ್ರೀಂ ತೀರ್ಪಿನ ಬೆನ್ನಲ್ಲೇ ರಾಜಕೀಯ ವಲಯದಲ್ಲೂ ಸಂಚಲನ ಸೃಷ್ಟಿಯಾಗಿದೆ. ಇತ್ತ ಧಾರವಾಡದ ನಿವಾಸದಲ್ಲಿ ಭಾವುಕ ಕ್ಷಣಗಳು ಕಂಡುಬಂದಿವೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಗೆ ಹೈಕೋರ್ಟ್ ವಿಭಾಗೀಯ ಪೀಠ ತಡೆ ನೀಡಿ ವಿನಯ್ ಕುಲಕರ್ಣಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಿಬಿಐ ಹಾಗೂ ಯೋಗೀಶ್ ಗೌಡ ಅವರ ಸಹೋದರ ಗುರುನಾಥ ಗೌಡ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಚಂದ್ರಶೇಖರ್ ಅವರಿದ್ದ ಸುಪ್ರೀಂಕೋರ್ಟ್ ಪೀಠ ಅರ್ಜಿಯ ವಿಚಾರಣೆ ನಡೆಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದೆ. ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ರದ್ದುಗೊಳಿಸಿರುವ ಪೀಠ, ಮುಂದಿನ ಎರಡು ವಾರಗಳೊಳಗೆ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವಂತೆ ವಿನಯ್ ಕುಲಕರ್ಣಿಗೆ ನಿರ್ದೇಶನ ನೀಡಿದೆ.

ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಲು ಸುಪ್ರೀಂಕೋರ್ಟ್ ಹಲವು ಕಾರಣಗಳನ್ನು ನೀಡಿದೆ. ಶಿಕ್ಷೆಗೆ ತಡೆ ನೀಡಿದ್ದ ಹೈಕೋರ್ಟ್ ಆದೇಶ ದೋಷಪೂರಿತವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಶಾಸಕ ಸ್ಥಾನದಿಂದ ಅನರ್ಹರಾಗುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಶಿಕ್ಷೆಗೆ ತಡೆ ನೀಡುವುದು ಸಮರ್ಥನೀಯವಲ್ಲ ಎಂದು ಸ್ಪಷ್ಟಪಡಿಸಿದೆ.

ಅಪರಾಧಿಗೆ ಮೇಲ್ಮನವಿಯಲ್ಲಿ ಬಲವಾದ ವಾದವಿರುವುದಷ್ಟೇ ಅಲ್ಲ, ಅದರಲ್ಲಿ ಯಶಸ್ಸು ಸಾಧಿಸುವ ಸಾಧ್ಯತೆಯೂ ಇರಬೇಕು. ಆದರೆ, ಈ ಪ್ರಕರಣದಲ್ಲಿ ಅಂತಹ ಅಂಶಗಳನ್ನು ಹೈಕೋರ್ಟ್ ಸ್ಪಷ್ಟವಾಗಿ ವಿವರಿಸಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಪ್ರತಿಕೂಲ ಸಾಕ್ಷಿಯಾಗಿದ್ದ ಯೋಗೀಶ್ ಗೌಡ ಅವರ ಪತ್ನಿಯ ಹೇಳಿಕೆಯನ್ನು ಹೈಕೋರ್ಟ್ ಪರಿಗಣಿಸಿರುವುದನ್ನೂ ಸುಪ್ರೀಂಕೋರ್ಟ್ ಗಮನಿಸಿದೆ. ಗಂಭೀರ ಅಪರಾಧಗಳಲ್ಲಿ ಬಲವಾದ ಕಾರಣಗಳಿಲ್ಲದೆ ಶಿಕ್ಷೆಯನ್ನು ಅಮಾನತುಗೊಳಿಸಬಾರದು ಎಂದು ಅಭಿಪ್ರಾಯಪಟ್ಟಿದೆ.

ಇದಲ್ಲದೆ, ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿ ಯಾವ ಲೋಪಗಳಿವೆ ಎಂಬುದನ್ನು ಹೈಕೋರ್ಟ್ ವಿವರಿಸಿಲ್ಲ. ವಿನಯ್ ಕುಲಕರ್ಣಿ ಖುಲಾಸೆಯಾಗಲು ಕಾರಣವಾಗಬಹುದಾದ ಅಂಶಗಳನ್ನೂ ಗುರುತಿಸಿಲ್ಲ. ಮೇಲ್ಮನವಿ ವಿಚಾರಣೆ ವಿಳಂಬವಾಗಬಹುದು ಎಂಬ ಕಾರಣವೊಂದೇ ಜಾಮೀನು ನೀಡಲು ಸಾಕಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಕರ್ನಾಟಕ ಹೈಕೋರ್ಟ್‌ನಲ್ಲಿ ಇತರ ಹೈಕೋರ್ಟ್‌ಗಳಿಗೆ ಹೋಲಿಸಿದರೆ ಮೇಲ್ಮನವಿಗಳ ಸಂಖ್ಯೆ ಕಡಿಮೆಯಿದೆ ಎಂಬ ಅಂಶವನ್ನೂ ಉಲ್ಲೇಖಿಸಿದೆ.

ಇನ್ನು ಸುಪ್ರೀಂಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಧಾರವಾಡದ ವಿನಯ್ ಕುಲಕರ್ಣಿ ನಿವಾಸದಲ್ಲಿ ಭಾವುಕ ವಾತಾವರಣ ನಿರ್ಮಾಣವಾಯಿತು. ಅಭಿಮಾನಿಗಳನ್ನು ತಬ್ಬಿಕೊಂಡು ವಿನಯ್ ಕುಲಕರ್ಣಿ ಕಣ್ಣೀರಿಟ್ಟರು. ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಭಾವುಕರಾದರು.

ಮುಂದಿನ ದಿನಗಳಲ್ಲಿ ವಿನಯ್ ಕುಲಕರ್ಣಿ ಮುಂದೆ ಕಾನೂನು ಹೋರಾಟದ ಅವಕಾಶಗಳಿವೆ. ಸುಪ್ರೀಂಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಬಹುದಾದರೂ, ಅದನ್ನು ಪರಿಗಣಿಸುವ ಸಾಧ್ಯತೆ ಕಡಿಮೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಅವರು ಈಗಾಗಲೇ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಅದರ ವಿಚಾರಣೆ ಬಾಕಿಯಿದೆ. ಈ ಮೇಲ್ಮನವಿಯನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಹೈಕೋರ್ಟ್‌ಗೆ ಮನವಿ ಮಾಡಬಹುದು. ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿದರೆ ರಿಲೀಫ್ ಸಿಗಲಿದೆ. ಆದರೆ, ವಿಚಾರಣಾ ನ್ಯಾಯಾಲಯದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದರೆ ಜೈಲಿನಲ್ಲೇ ಮುಂದುವರಿಯಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ಗೆ ಮತ್ತೆ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ಅಂತಿಮವಾಗಿ ಅವರ ಭವಿಷ್ಯವನ್ನು ಸುಪ್ರೀಂಕೋರ್ಟ್ ತೀರ್ಮಾನಿಸಲಿದೆ.

Related Articles

Back to top button