*ಪ್ರತಿಭಟನೆಯ ನಡುವೆ ಬರಸಿಡಿಲು*: *ಆಶಾ ಕಾರ್ಯಕರ್ತೆಯ ಮಗನ ದುರಂತ ಅಂತ್ಯ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ತಮ್ಮ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯೊಬ್ಬರಿಗೆ ವಿಧಿ ಬರಸಿಡಿಲಿನಂತೆ ಎರಗಿದೆ. ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದ ತಾಯಿಗೆ ಮಗನ ಸಾವಿನ ಸುದ್ದಿ ತಲುಪಿದೆ. 21 ವರ್ಷದ ಮಗನನ್ನು ಕಳೆದುಕೊಂಡ ತಾಯಿಯ ದುಃಖ ಹೇಳತೀರದಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿನಿಂದ ಊರಿಗೆ ಧಾವಿಸಿದ ತಾಯಿಯ ಕುಟುಂಬದಲ್ಲಿ ಇದೀಗ ಆಕ್ರಂದನ ಮುಗಿಲು ಮುಟ್ಟಿದೆ.
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕಾರ್ಜುವಳ್ಳಿ ಗ್ರಾಮದ ಆಶಾ ಕಾರ್ಯಕರ್ತೆ ರೂಪ ಅವರ ಪುತ್ರ ಸುಜಯ್ (21) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬುಧವಾರ (ನವೆಂಬರ್ 25) ಸಂಜೆ ಲಕ್ಷ್ಮೀಪುರದ ಬಳಿ ಬೈಕ್ ಅಪಘಾತ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸುಜಯ್ ಮೃತಪಟ್ಟಿದ್ದಾರೆ.
ಇತ್ತ ರೂಪ ಅವರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿದ್ದ ಆಶಾ ಕಾರ್ಯಕರ್ತೆಯರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಗನ ಸಾವಿನ ಸುದ್ದಿ ತಿಳಿದಿದೆ. ತಕ್ಷಣವೇ ಪ್ರತಿಭಟನಾ ಸ್ಥಳದಿಂದ ಆಲೂರಿಗೆ ವಾಪಸಾಗಿದ್ದಾರೆ.
ಮಗನನ್ನು ಕಳೆದುಕೊಂಡ ರೂಪ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸುಜಯ್ ಅವರ ಮೃತದೇಹವನ್ನು ಆಲೂರು ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಮುಂದಿನ ಕ್ರಮಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಘಟನೆಗೆ ಸಂಬಂಧಿಸಿದ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.



