Kannada NewsKarnataka NewsLatestPolitics

*ಆಶಾ ಕಾರ್ಯಕರ್ತೆಯರು ಅನಿವಾರ್ಯವಲ್ಲ ಎಂದ ಖಾದರ್‌*: *“ಸರ್ಕಾರವನ್ನು ಹೆದರಿಸಲು ಬರಬೇಡಿ” ಎಂದು ಸಿಎಂ ಖಡಕ್ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಪ್ರತಿಭಟನೆ ಹತ್ತನೇ ದಿನಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ಸಚಿವರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ಆರೋಗ್ಯ ಸಚಿವ ಯು.ಟಿ. ಖಾದರ್ ನೀಡಿದ ಹೇಳಿಕೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಪರಿಸ್ಥಿತಿ ತಿಳಿಗೊಳಿಸಲು ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಧ್ಯಪ್ರವೇಶಿಸಿದ್ದು, ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಧರಣಿ ಮುಂದುವರಿಸಿದ್ದಾರೆ. ಗೌರವಧನ ಹೆಚ್ಚಳ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ನಡುವೆ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿರುವಾಗಲೇ ಸಚಿವರ ಹೇಳಿಕೆಗಳು ಸರ್ಕಾರಕ್ಕೆ ಮುಜುಗರ ತಂದಿವೆ.

ಮೊದಲು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ಆಶಾ ಕಾರ್ಯಕರ್ತೆಯರ ಬೇಡಿಕೆ ಕುರಿತು ಮಾತನಾಡುವಾಗ, ಕೇಳಿದಾಗಲೆಲ್ಲ ಕಂಠಿಹಾರ ಕೊಡಲು ಸಾಧ್ಯವೇ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಹೇಳಿಕೆಯೂ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನಲ್ಲಿ ಮಾತನಾಡಿದ್ದ ಖಾದರ್, ಆಶಾ ಕಾರ್ಯಕರ್ತೆಯರ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆಶಾ ಕಾರ್ಯಕರ್ತೆಯರು ನಮ್ಮ ಮೇಲೆ ವಿಶ್ವಾಸ ಇಡದಿದ್ದರೆ ನಾವು ಅವರ ಮೇಲೆ ಯಾಕೆ ವಿಶ್ವಾಸ ಇಡಬೇಕು ಎಂದು ಪ್ರಶ್ನಿಸಿದ್ದರು.

ಹತ್ತು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಆರೋಗ್ಯ ಇಲಾಖೆ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಸೇವೆಗಳಿಗೆ ತೊಂದರೆಯಾಗಿದೆಯೇ ಎಂದು ಪ್ರಶ್ನಿಸಿದ ಅವರು, ಹೆರಿಗೆ ಸೇರಿದಂತೆ ಆರೋಗ್ಯ ಸೇವೆಗಳು ಎಂದಿನಂತೆ ನಡೆಯುತ್ತಿವೆ ಎಂದಿದ್ದರು. ಆಶಾ ಕಾರ್ಯಕರ್ತೆಯರು ಇದ್ದರೂ ನಡೆಯುತ್ತದೆ, ಇಲ್ಲದಿದ್ದರೂ ನಡೆಯುತ್ತದೆ ಎಂಬುದನ್ನು ಅವರೇ ತೋರಿಸಿಕೊಟ್ಟಿದ್ದಾರೆ. ಆಶಾ ಕಾರ್ಯಕರ್ತೆಯರು ಇಲ್ಲದಿದ್ದರೆ ವೈದ್ಯರು ಮತ್ತು ನರ್ಸ್‌ಗಳು ಇಲ್ಲವೇ ಎಂದು ಪ್ರಶ್ನಿಸಿದ್ದರು. ಆರೋಗ್ಯ ಸಚಿವನಾಗಿ ವೈಯಕ್ತಿಕವಾಗಿ ತಮಗೆ ಇದರಿಂದ ಬೇಸರವಾಗಿದೆ ಎಂದೂ ಹೇಳಿದ್ದರು.

ಖಾದರ್ ಹೇಳಿಕೆ ವಿವಾದದ ಬೆನ್ನಲ್ಲೇ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಶಾ ಕಾರ್ಯಕರ್ತೆಯರು ನಮಗೆ ಬೇಡ ಎಂಬುದು ಸುಳ್ಳು. ನಮಗೆ ಎಲ್ಲರೂ ಬೇಕು ಎಂದು ಸ್ಪಷ್ಟಪಡಿಸಿದರು. ಸಚಿವ ಯು.ಟಿ. ಖಾದರ್ ಯಾವ ದೃಷ್ಟಿಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಸಚಿವ ನರೇಂದ್ರಸ್ವಾಮಿಯೂ ಮಾತನಾಡಿದ್ದಾರೆ. ಆದರೆ ಸರ್ಕಾರದ ನಿಲುವು ಹಾಗಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿಯಾಗಿ ನಾನು ಮನವಿ ಮಾಡುತ್ತಿದ್ದೇನೆ. ಪ್ರತಿಭಟನೆ ಹಿಂಪಡೆಯಿರಿ, ನಿಮ್ಮನ್ನು ಕೂರಿಸಿಕೊಂಡು ಮಾತನಾಡುತ್ತೇನೆ ಎಂದರು. ಆಶಾ ಕಾರ್ಯಕರ್ತೆಯರ ವಿಚಾರವಾಗಿ ಇಂದು ಸಂಜೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ. ನಾಳೆ ಸಂಜೆ ನಾನು ಬಂದ ಬಳಿಕ ಮತ್ತೆ ಮಾತುಕತೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಈಗಾಗಲೇ ಐದಾರು ಬಾರಿ ಮಾತುಕತೆ ನಡೆಸಿದ್ದೇನೆ. ಇದೊಂದೇ ಇಲಾಖೆಯ ವಿಚಾರವಾಗಿದ್ದರೆ ತಕ್ಷಣ ನಿರ್ಧಾರ ಕೈಗೊಳ್ಳಬಹುದಿತ್ತು. ಆದರೆ ಎಲ್ಲರೂ ಇದೇ ರೀತಿ ಬೀದಿಗಿಳಿದು ಪ್ರತಿಭಟನೆ ನಡೆಸಿದರೆ ಹೇಗೆ? ಪ್ರತಿಯೊಬ್ಬರ ಬದುಕೂ ಮುಖ್ಯ ಎಂದು ಸಿಎಂ ಹೇಳಿದರು.

ಇದೇ ವೇಳೆ ಪ್ರತಿಭಟನಾಕಾರರಿಗೆ ಭಾವನಾತ್ಮಕ ಮನವಿಯನ್ನೂ ಮಾಡಿದ ಡಿ.ಕೆ. ಶಿವಕುಮಾರ್, ಹೆಣ್ಣು ಎಂದರೆ ಕುಟುಂಬದ ಕಣ್ಣು ಎಂಬ ಅರಿವು ನನಗಿದೆ. ಪ್ರಣಾಳಿಕೆಯಲ್ಲಿ ಹೇಳಿದಂತೆ ಕೊಟ್ಟಿದ್ದೇವೆ, ಈಗಲೂ ಕೊಡುತ್ತೇವೆ. ಇಲ್ಲ ಎಂದು ಹೇಳುವುದಿಲ್ಲ ಎಂದರು.

ದಯವಿಟ್ಟು ಪ್ರತಿಷ್ಠೆ ಬಿಡಿ, ಹಠ ಮಾಡಬೇಡಿ. ಸರ್ಕಾರವನ್ನು ಹೆದರಿಸುವ ಕೆಲಸ ಮಾಡಬೇಡಿ. ನಮ್ಮ ಮೇಲೆ ವಿಶ್ವಾಸ ಇಟ್ಟು ತಾಳ್ಮೆಯಿಂದ ಹೋರಾಟವನ್ನು ವಾಪಸ್ ಪಡೆಯಿರಿ. ಖಂಡಿತ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ಇನ್ನು ಪ್ರತಿಭಟನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಸಿಎಂ, ಬೇರೆಯವರು ರಾಜಕಾರಣಕ್ಕೆ ಬಂದು ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಾರೆ. ಅವರಿಂದ ಯಾವುದೇ ಸಹಾಯ ಮಾಡಲು ಸಾಧ್ಯವಿಲ್ಲ ಎಂದರು.

ಯುಪಿಎ ಸರ್ಕಾರದ ಬಳಿಕ ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿಲ್ಲ. ರಾಜ್ಯ ಸರ್ಕಾರವೇ ಹೆಚ್ಚಿಸುತ್ತಾ ಬಂದಿದೆ. ಬಿಜೆಪಿಯವರು ಕೇಂದ್ರ ಸರ್ಕಾರದ ಬಳಿ ಹೋಗಿ ಏಕೆ ಗೌರವಧನ ಹೆಚ್ಚಿಸುವಂತೆ ಕೇಳುತ್ತಿಲ್ಲ? ನಮ್ಮ ಮೇಲೆಯೇ ಏಕೆ ಹೊರೆ ಹಾಕುತ್ತಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ಹತ್ತನೇ ದಿನಕ್ಕೆ ಕಾಲಿಟ್ಟಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸರ್ಕಾರ ಯಾವ ರೀತಿಯ ಪರಿಹಾರ ನೀಡಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

Related Articles

Back to top button