*ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ರವಿ ಕೋಟಾರಗಸ್ತಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ, ಬೆಳಗಾವಿ ಸಾಹಿತಿ ರವಿ ಕೋಟಾರಗಸ್ತಿ ಭಾಜನರಾದರು.
ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ಶನಿವಾರ ನಡೆದ ಕೇರಳ ರಾಜ್ಯಮಟ್ಟದ ಎಂಟನೇ ಕನ್ನಡ ಸಮ್ಮೇಳನದಲ್ಲಿ, ಸಮ್ಮೇಳನದ ಸರ್ವಾಧ್ಯಕ್ಷರಾದ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಮಹಾಸ್ವಾಮೀಜಿ, ಶಿವರಾಮ ಕಾಸರಗೋಡ ಮತ್ತಿತರ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ಧಾರ್ಮಿಕ ಮತ್ತು ದತ್ತಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ 37ವರ್ಷ ಕೆಲಸ ಮಾಡಿದ ರವಿ ಕೋಟಾರಗಸ್ತಿ ಅವರು, ಸಾಹಿತ್ಯ ಕೃಷಿಯಲ್ಲೂ ತೊಡಗಿದ್ದಾರೆ. ರಂಗಭೂಮಿ ದಿಗ್ಗಜರ ಜತೆಗೆ, ರಂಗಭೂಮಿಯಲ್ಲಿ ತೊಡಗಿದ್ದಾರೆ. ಅವರ ಈ ಸಾಧನೆ ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ.
ಗಡಿಭಾಗದಲ್ಲಿ ಪ್ರಾಮಾಣಿಕವಾಗಿ ಕನ್ನಡ ಸೇವೆ ಸಲ್ಲಿಸಿದ್ದೆ. ಈಗ ಅದನ್ನು ಗುರುತಿಸಿ ಹೊರರಾಜ್ಯದವರು ಪುರಸ್ಕಾರ ನೀಡುತ್ತಿರುವುದು ಖುಷಿ ತಂದಿದೆ. ಜಿಲ್ಲೆಯ ಎಲ್ಲ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಮನಸ್ಸುಗಳಿಗೆ ಅರ್ಪಿಸುತ್ತೇನೆ ಎಂದು ರವಿ ಹೇಳಿದರು.



