Kannada NewsKarnataka News

ರಜೆಗೆ ಬಂದಿದ್ದ ಯೋಧ ರಸ್ತೆ ಅಪಘಾತಕ್ಕೆ ಬಲಿ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಹುಲಿಕೊತ್ತಲ ಗ್ರಾಮದ ಬಳಿ ಭಾನುವಾರ ಎರಡು ಬೈಕುಗಳ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಾಲೂಕಿನ ಗುಂಡೇನಟ್ಟಿ ಗ್ರಾಮದ ಯೋಧ ಮೃತಪಟ್ಟಿದ್ದಾರೆ.

ತಾಲೂಕಿನ ಗುಂಡೇನಟ್ಟಿ ನಿವಾಸಿ ಮತ್ತು ಮದ್ರಾಸ್ ರೆಜಿಮೆಂಟ್‌ನ ಯೋಧ ಈರಣ್ಣ ಅಪ್ಪಯ್ಯ ಆಲಕಟ್ಟಿ (೨೩) ಮೃತ ಯೋಧ.
ಕಳೆದ ೩ ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಈರಣ್ಣ ಸಧ್ಯ ಉತ್ತರಪ್ರದೇಶದ ಗಾಜಿಯಾದಾಬ್ ಯುನಿಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ೪೫ ದಿನಗಳ ರಜೆಯ ಮೇಲೆ ಇತ್ತೀಚೆಗೆ ಸ್ವಗ್ರಾಮಕ್ಕೆ ಬಂದಿದ್ದರು.

Home add -Advt

ಭಾನುವಾರ ಸಂಬಂಧಿಕರ ಮನೆಗೆ ಬೈಕ್‌ನಲ್ಲಿ ಹೊರಟಿದ್ದ ಅವರು ಹುಲಿಕೊತ್ತಲ ಬಳಿ ಎದುರಿನಿಂದ ಬಂದ ಬೈಕ್ ಗುದ್ದಿದ್ದರಿಂದ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.
ಮೃತರಿಗೆ ತಂದೆ-ತಾಯಿ, ಓರ್ವ ಸಹೋದರ, ಓರ್ವ ಸಹೋದರಿ ಇದ್ದಾರೆ. ಮೃತರ ಮರಣೋತ್ತರ ಪರೀಕ್ಷೆಯ ಬಳಿಕ ಪಾರ್ಥೀವ ಶರೀರ ಸೋಮವಾರ ಬೆಳಗಾವಿಯಿಂದ ಸ್ವಗ್ರಾಮ ತಲುಪಿದ ಬಳಿಕ ಗ್ರಾಮದಲ್ಲಿ ಅಂತ್ಯಕ್ರಿಯೆ ಜರುಗಿತು.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಭಾರತೀಯ ಸೇನೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅಗಲಿದ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಈರಣ್ಣ ಅವರ ಕುಟುಂಬದ ಸದಸ್ಯರು, ಸಂಬಂಧಿಗಳು, ಗ್ರಾಮಸ್ಥರು ಇದ್ದರು.

Related Articles

Back to top button