ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ್ ಅವರ ಮನವಿಯಂತೆ ಮುಖ್ಯಮಂತ್ರಿಗಳು ನೇಕಾರರಿಗೆ ಪರಿಹಾರ ನೀಡುವ ಮತ್ತು ಸಾಲ ಮನ್ನಾ ಮಾಡುವ ನಿರ್ಣಯ ಕೈಗೊಂಡಿದ್ದಾರೆ ಎಂದು ಬೆಳಗಾವಿ ಜಿಲ್ಲಾ ನೇಕಾರ ಸಮಿತಿ ಉಪಾಧ್ಯಕ್ಷ ನೀಲಕಂಠ ಮಾಸ್ತಮರಡಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಇತ್ತೀಚೆಗೆ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ನೇಕಾರರ ನಿಯೋಗ ಭೇಟಿಯಾಗಿ ನೇಕಾರ ಸಮಸ್ಯೆಗಳ ಬಗ್ಗೆ ವಿವರಿಸಿ, ಪ್ಯಾಕೇಜ್ ನೀಡುವಂತೆ ಕೋರಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು.
ಅದರಂತೆ ಮುಖ್ಯಮಂತ್ರಿಗಳು ಸ್ಪಂದಿಸಿ ಸುಮಾರು 54 ಸಾವಿರ ಕೈಮಗ್ಗ ನೇಕಾರರಿಗೆ ₹2000 ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಸೂಚಿಸಿದ್ದಾರೆ. ಅಲ್ಲದೆ ನೇಕಾರರ ಒಂದು ಲಕ್ಷ ಸಾಲ ಮರುಪಾವತಿಗೂ ಆದೇಶಿಸಿದ್ದಾರೆ. ಈಗಾಗಲೆ ನೇಕಾರರು 1 ಲಕ್ಷ ಸಾಲ ಪಡೆದು ಅದರ ಹಣ ಕಟ್ಟಿದ್ದರೂ ಕೂಡಾ ಈಗ ಅದನ್ನು ನೇಕಾರರಿಗೆ ಮರು ಪಾವತಿಸಲು ಸರ್ಕಾರ ಆದೇಶಿಸಿದೆ. ಈ ನಿರ್ಧಾರವನ್ನು ನೇಕಾರ ಸಮಿತಿ ಸ್ವಾಗತಿಸುತ್ತದೆ ಎಂದು ಮಾಸ್ತಮರ್ಡಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ