ನೀತಾ ರಾವ್
ರಾಮನು ಶ್ರೀಮನ್ನಾರಾಯಣನ ಅವತಾರವೇ ಹೌದಾದರೂ ಮನುಷ್ಯ ರೂಪದಲ್ಲಿ ಈ ಧರೆಯ ಮೇಲೆ ಜನಿಸಿದ ಮೇಲೆ ಯಾವ್ಯಾವ ರೀತಿ-ರಿವಾಜುಗಳಿಂದ, ನಡೆ-ನುಡಿಗಳಿಂದ ತನ್ನ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದನು ಮತ್ತು ಸಾವಿರಾರು ವರ್ಷಗಳಾದರೂ ಅನುಕರಣೀಯನಾದನು ಎಂಬುದಕ್ಕೆ ರಾಮಾಯಣದ ತುಂಬ ಉದಾಹರಣೆಗಳು ಸಿಗುತ್ತವೆ.
ತನ್ನ ತಂದೆ-ತಾಯಿಯರ ಮಾತುಗಳನ್ನು ಅತ್ಯಂತ ಭಕ್ತಿಯಿಂದ ಪಾಲಿಸಿದ ರಾಮನು ಅದಕ್ಕಾಗಿ ಹದಿನಾಲ್ಕು ವರ್ಷಗಳ ವನವಾಸವನ್ನು ಅನುಭವಿಸಲು ಕಿಂಚಿತ್ತೂ ಹಿಂಜರಿಯಲಿಲ್ಲ. ತಮ್ಮಂದಿರಿಗೆ ಯಾವತ್ತೂ ಹಿರಿಯಣ್ಣನೇ ಆತ, ನಡೆ-ನುಡಿ ಎರಡರಲ್ಲೂ ಆ ಜೇಷ್ಠತೆ ಎದ್ದು ಕಾಣುತ್ತದೆ. ರಾಮನ ಸತಿಯಾದ ಮೇಲೆ ಸೀತೆಗೆ ಎಂದಿಗೂ ಇತರರನ್ನು ಅವಲಂಬಿಸುವ ಅವಶ್ಯಕತೆಯೇ ಉದ್ಭವಿಸಲಿಲ್ಲ. ಎಲ್ಲ ಕಷ್ಟ-ಸುಖಗಳಿಗೆ ಸಖನಾಗಿ ಸದಾ ಶ್ರೀರಾಮಚಂದ್ರ ಅವಳೊಡನೆ ಇದ್ದೇ ಇದ್ದ.
ಇದೆಲ್ಲ ತನ್ನ ಸ್ವಂತ ಪರಿವಾರದೊಂದಿಗಾಯಿತು. ಆದರೆ ಇತರರೊಂದಿಗೂ ರಾಮನ ನಡುವಳಿಕೆ ಅದೆಷ್ಟು ಗೌರವಯುತವಾಗಿತ್ತು ಎಂಬುದಕ್ಕೆ ಅನೇಕ ನಿದರ್ಶನಗಳು ನಮಗೆ ಸಿಗುತ್ತವೆ. ರಾಮನು ಜಾತಿ, ಅತಂಸ್ತುಗಳ ಆಧಾರದ ಮೇಲೆ ಎಂದಿಗೂ ತಾರತಮ್ಯವನ್ನೆಣಸದೇ ಕೇವಲ ಸ್ನೇಹ, ಪ್ರೀತಿ ಮತ್ತು ಭಕ್ತಿಗಳಿಗಾಗಿ ವಾತ್ಸಲ್ಯದ ಹೊಳೆಯನ್ಮೇ ಹರಿಸಿದವನು. ಕಾಡಿನಲ್ಲಿ ಮೊದಲು ಸಿಕ್ಕ ನಿಷಾದ ರಾಜನನ್ನು ಅವನು ಯಾವತ್ತೂ ತನ್ನ ಸ್ನೇಹಿತನನ್ನಾಗಿಯೇ ನಡೆಸಿಕೊಂಡನು. ಯಾವತ್ತೂ ತನ್ನ ಜೊತೆಯಲ್ಲಿ, ತನಗೆ ಸಮಾನವಾದ ಸ್ಥಾನದಲ್ಲಿಯೇ ಅವನನ್ನು ಕೂಡಿಸಿಕೊಂಡು ಉಪಚರಿಸುವುದು ರಾಮನ ಶ್ರೇಷ್ಠತೆಗೆ ಸಿಗುವ ಮೊದಲ ಉದಾಹರಣೆ.
ನಂತರ ಋಷ್ಯಮೂಕ ಪರ್ವತದಲ್ಲಿ ಮೊದಲ ಬಾರಿಗೆ ಭೇಟಿಯಾಗುವ ಹನುಮಂತನಂತೂ ರಾಮನ ಪರಮ ಭಕ್ತನೇ ಆಗಿಹೋದ. ತಮ್ಮಿಬ್ಬರದೂ ಜನ್ಮಜನ್ಮಾಂತರದ ಸಂಬಂಧವೇನೋ ಅನಿಸುವಷ್ಟರ ಮಟ್ಟಿಗೆ ದಿವ್ಯವಾದ ಅನುಭೂತಿಯಲ್ಲಿ ರಾಮ-ಹನುಮರು ಪರಸ್ಪರ ಭಕ್ತ-ಭಗವಂತ ಭಾವದಲ್ಲಿ ಮಿಂದುಹೋಗುತ್ತಾರೆ. ಹಾಗೆಂದು ಹನುಮನು ದೀನನಲ್ಲ. ಮಹಾನ್ ಶಕ್ತಿವಂತ, ಆದರೆ ತನ್ನ ಅಸೀಮ ಶಕ್ತಿಯ ಬಳಕೆಯನ್ನು ಕಂಡ ಕಂಡಲ್ಲಿ ಮಾಡುವವನಲ್ಲ. ರಾಮನೆದುರು ಅವನು ಮಹಾನ್ ಭಕ್ತ. ರಾಮನನ್ನು ಕಣ್ಣಿನಿಂದ ಮನಸ್ಸಿಗಿಳಿಸಿಕೊಂಡು ಆನಂದದಲ್ಲಿ ತೇಲಿಹೋಗುವುದೇ ತನ್ನ ಭಾಗ್ಯವೆಂದುಕೊಂಡವನು. ಅತ್ಯಂತ ವಿನೀತ, ಕರುಣಾಸಾಗರ, ಮಹಾನ್ ಪರಾಕ್ರಮಿ, ಮತ್ತು ಈ ಎಲ್ಲ ಗುಣಗಳನ್ನು ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಉಪಯೋಗಿಸಲು ಬಲ್ಲ ಜಾಣ. ತನ್ನ ರಾಮನಿಗಾಗಿ ಸಾಗರೋಲ್ಲಂಘನವನ್ನೇ ಮಾಡಿದ ಧೀರ. ರಾಮನ ಧರ್ಮಪತ್ನಿ ಜಾನಕಿಯ ಮುಂದೆ ಮಂಡಿಯೂರಿ ಕುಳಿತು ಪರಿಚಯಿಸಿಕೊಳ್ಳುವ ದೂತ. ಅಶೋಕವನವನ್ನು ನೋಡನೋಡುತ್ತಲೇ ಹಾಳುಗೆಡುಹಿ ತನ್ನ ಬಲದ ಝಲಕನ್ನು ತೋರಿದ ತುಂಟ. ಅವನ ಮೇಲೆ ರಾಮನದೂ ಸಮುದ್ರದಷ್ಟೇ ಆಳ-ವಿಸ್ತಾರವಾದ ದೃಢ ನಂಬಿಕೆ. ಹಾಗಾಗಿಯೇ ನೋಡನೋಡುತ್ತಲೇ ಇವನು ರಾಮನ ಬಲಗೈಬಂಟನಾದವ. ಸುಗ್ರೀವನನ್ನೂ ಆದರ ಭಾವದಿಂದಲೇ ನೋಡಿದವನು ರಾಮ. ತಾನೇ ವಾಲಿಯನ್ನು ಸೋಲಿಸಿ ಸುಗ್ರೀವನಿಗೆ ರಾಜ್ಯವನ್ನು ಮರಳಿ ಕೊಡಿಸಿದರೂ ಅವನಿಂದ ಕೇಳಿದ್ದು ಕೇವಲ ಸೀತೆಯನ್ನು ಹುಡುಕಿ ಕರೆತರಲು ಸಹಾಯ. ಇನ್ನೊಬ್ಬರ ರಾಜ್ಯ, ಧನ-ಕನಕಗಳ ಮೇಲೆ ಅವನಿಗೆ ಎಳ್ಳಷ್ಟೂ ಲೋಭವಿಲ್ಲ. ವಾಲಿಯನ್ನು ಸೋಲಿಸಿದರೂ ಅವನ ಬಗ್ಗೆ ಕಿಂಚಿತ್ತೂ ಕೀಳು ಭಾವನೆಯಾಗಲಿ, ವೈರವಾಗಲಿ ಇಲ್ಲವೇ ಇಲ್ಲ. ಸುಗ್ರೀವನನ್ನು ರಾಜನನ್ನಾಗಿ ಮಾಡಿ, ವಾಲಿಯ ಮಗ ಅಂಗದನನ್ನೇ ಯುವರಾಜನನ್ನಾಗಿ ಮಾಡುವಲ್ಲಿಯೂ ರಾಮನ ವ್ಯಕ್ತಿತ್ವದ ಎತ್ತರದ ಪರಿಚಯ ನಮಗಾಗುತ್ತದೆ.
ಪಕ್ಷಿರಾಜ ಜಟಾಯು ಕೂಡ ರಾಮನ ಮಡದಿ ಸೀತೆಯನ್ನು ರಾವಣನ ಬಂಧನದಿಂದ ಬಿಡಿಸಲು ತನ್ನ ಮುದಿತನದಲ್ಲೂ ಕೆಚ್ಚೆದೆಯಿಂದ ಹೋರಾಡುತ್ತಾನೆ. ರೆಕ್ಕೆ ಮುರಿದು ಧರೆಗುರುಳಿದ ಮಹಾ ಗರುಡ ಪಕ್ಷಿಯ ಪ್ರಾಣವು ಕೇವಲ ಶ್ರೀರಾಮನ ಬರುವಿಗಾಗಿ ಕಾದು ನಿಂತಿರುತ್ತದೆ. ಆ ಮಾರ್ಗವಾಗಿ ಬಂದ ರಾಮನು ಜಟಾಯುವಿನ ಸಂದೇಶವನ್ನು ತಿಳಿದು, ಅವನ ಅಂತಿಮ ಸಂಸ್ಕಾರವನ್ನು ಅತ್ಯಂತ ಗೌರವಯುತವಾಗಿ ನೆರವೇರಿಸುತ್ತಾನೆ. ನಂತರದಲ್ಲಿ ಸಿಗುವ ಶಬರಿಯು ಎಂಜಲುಮಾಡಿ ರುಚಿ ನೋಡಿ ನೋಡಿ ಕೈಯಾರೆ ಕೊಡುವ ಹಣ್ಣುಗಳನ್ನು ತಿಂದು ತೃಪ್ತನಾಗುವ ಶ್ರೀ ರಾಮನು ಅವಳಿಗೆ ಮರಣವನ್ನು ಕರುಣಿಸುತ್ತಾನೆ. ರಾಮನ ಜೊತೆಗೆ ಈ ಎಲ್ಲ ಭಕ್ತರ ಹೆಸರುಗಳು ಅಜರಾಮರವಾಗಿವೆ. ಏಕೆಂದರೆ ರಾಘವನು ಅವರಿಗೆಲ್ಲ ತನ್ನ ಹೃದಯದಲ್ಲಿ ಉಚ್ಚ ಸ್ಥಾನವನಿತ್ತು ಗೌರವಿಸಿದನು. ಭಕ್ತಿಯಲ್ಲಿ, ಸ್ನೇಹದಲ್ಲಿ ಅವನೆಂದೂ ಇತರ ವಿಷಯಗಳನ್ನು ಬೆರೆಸಲಿಲ್ಲ. ಶುದ್ಧತೆಯೊಂದೇ ಮಾನದಂಡ ಅವನಿಗೆ.
ಲಂಕೆಯ ಮೇಲೆ ರಾಮನು ಮಾಡುವ ಯುದ್ಧವೂ ಕೂಡ ರಾಜ್ಯವಿಸ್ತಾರಕ್ಕಾಗಲಿ, ಹೊನ್ನು, ಹೆಣ್ಣಿಗಾಗಲಿ ಅಲ್ಲ. ಇತರರ ರಾಜ್ಯಗಳ ಮೇಲೆ ದಂಡೆತ್ತಿ ಹೋಗಿ ಗೆದ್ದು ಚಕ್ರವರ್ತಿಯಾಗಿ ಮೆರೆಯಬೇಕೆಂಬ ಅತಿಯಾಸೆಯಂತೂ ಅವನಲ್ಲಿ ಇಲ್ಲವೇ ಇಲ್ಲ. ತನ್ನ ಪ್ರಿಯ ಮಡದಿಯನ್ನು ಅಪಹರಿಸಿದ ರಾವಣನ ತನಕ ಅವನು ಹೋಗುವುದು ಅನಿವಾರ್ಯವಾಗಿತ್ತು. ಅವನದು ನ್ಯಾಯಕ್ಕಾಗಿ ಹೋರಾಡುವ ಧರ್ಮಯುದ್ಧವಾಗಿತ್ತು. ಆದಾಗ್ಯೂ ತಮ್ಮಿಬ್ಬರ ಮಧ್ಯದ ಜಗಳಕ್ಕೆ ನಿರಪರಾಧಿ ಸೈನಿಕರು ಪ್ರಾಣ ಕಳೆದುಕೊಳ್ಳುವುದು ರಾಮನಿಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. ಹಾಗಾಗಿಯೇ ರಾವಣನಿಗೆ ಸಂದೇಶವನ್ನೂ ಕಳಿಸುತ್ತಾನೆ ರಾಮ. ಯುದ್ಧದಿಂದಾಗುವ ಹಾನಿ ಅಪಾರ. ರಾಜರ ಪ್ರತಿಷ್ಠೆಗೆ ಬಡಪ್ರಜೆಗಳೇಕೆ ಸುಮ್ಮನೇ ಯುದ್ಧ ಮಾಡಬೇಕು ಎನ್ನುವ ರಾಮನ ನಿಲುವು ಅವನ ಅರಿವಿನ ಘನತೆಯನ್ನು ಎತ್ತಿ ತೋರಿಸುತ್ತದೆ. ಆದರೆ ತನ್ನ ಅಹಂಕಾರ ಮತ್ತು ಮೂರ್ಖತನದಿಂದ ಅಂಧನಾಗಿದ್ದ ಲಂಕಾಧಿಪತಿಗೆ ಯಾರ ಹಿತವಚನಗಳೂ ಹಿಡಿಸದೇ ಇದ್ದದ್ದು ಅವನ ದುರ್ದೈವ. ಅಣ್ಣನಿಗೆ ತಿಳಿಹೇಳಲು ಸೋತ ತಮ್ಮ ವಿಭೀಷಣ ರಾಮನ ಆಶ್ರಯಕ್ಕೆ ಬಂದಾಗ, ತನ್ನ ವೈರಿಯ ಅನುಜ, ಹೀಗೆ ಸೇರಿಕೊಂಡು ಮೋಸ ಮಾಡಬಹುದಾದ ಎಲ್ಲ ಸಂಭವವೂ ಇದ್ದರೂ ರಾಮನು ವಿಭೀಷಣನ ನಿಷ್ಠೆಯಲ್ಲಿ ಹುಳುಕು ಹುಡುಕುವ ಪ್ರಯತ್ನ ಮಾಡುವುದಿಲ್ಲ. ಆಸರೆ ಕೋರಿ ಬಂದವನನ್ನು ತೆರೆದ ಬಾಹುಗಳಿಂದ ಸ್ವಾಗತಿಸಿದ. ಅಸುರ ಕುಲದವನಾದರೂ ಅವನ ಧರ್ಮನಿಷ್ಠೆಗೆ ರಾಮನ ಮೃದು ಹೃದಯ ಮಣಿಯಿತು.
ರಾವಣನು ಹತನಾಗಿ, ರಾಮನ ಸೈನ್ಯ ಜಯಶಾಲಿಯಾಗಿ ಯುದ್ಧವು ಮುಗಿಯಲು, ಲಂಕೆಯ ಪ್ರಜೆಗಳ ಮನದಲ್ಲಿ ಕಾರ್ಮೋಡಗಳ ಕರಿನೆರಳು. ಗೆದ್ದ ರಾಜನ ಸೈನ್ಯವು ಸ್ವಾಭಾವಿಕವಾಗಿ ಸೋತ ರಾಜ್ಯದ ಕೊಳ್ಳೆ ಹೊಡೆಯುತ್ತದೆ, ಕೇಕೆ ಹಾಕಿ ರುದ್ರ ನರ್ತನಗೈಯ್ಯುತ್ತದೆ. ಸೋತವರ, ಸತ್ತವರ ಮನೆಯ ಸ್ತ್ರೀಯರ ಎದೆಯಲ್ಲಿ ಭಯವು ನಗಾರಿ ಭಾರಿಸುತ್ತದೆ. ಅವರ ಮಾನ-ಪ್ರಾಣಗಳು ಗೆದ್ದವರು ಮಾತ್ರ ನೀಡಬಹುದಾದ ಭಿಕ್ಷೆಯಾಗಿ ಬದಲಾಗುತ್ತವೆ. ಆದರೆ ರಾಮನು ಲಂಕೆಯ ನಗರವನ್ನೂ ಪ್ರವೇಶಿಸುವುದಿಲ್ಲ. ತನ್ನ ವಾನರ ಸೈನ್ಯಕ್ಕೂ ಪ್ರವೇಶಿಸಲು ಬಿಡುವುದಿಲ್ಲ. ಬದಲಾಗಿ ಸತ್ತ ಸೈನಿಕರ ಶವಸಂಸ್ಕಾರವನ್ನು ಅತ್ಯಂತ ಗೌರವದಿಂದ ನೆರವೇರಿಸುವಂತೆ ತಿಳಿಸುತ್ತಾನೆ. ಅಣ್ಣನ ರಾಜ್ಯದ ಅಧಿಕೃತ ವಾರಸುದಾರ ವಿಭೀಷಣನನ್ನು ಸಿಂಹಾಸನದ ಮೇಲೆ ಪ್ರತಿಷ್ಠಾಪಿಸಿ ತಾನು, ಸೀತೆ ಮತ್ತು ಪರಿವಾರದೊಂದಿಗೆ ಅಯೋಧ್ಯೆಗೆ ಮರಳುತ್ತಾನೆ.
ಸೀತಾ ಸಮೇತನಾಗಿ ಪಟ್ಟಾಭಿಷೇಕ ಮಾಡಿಸಿಕೊಂಡ ರಾಮನು ಸರ್ವಶ್ರೇಷ್ಠ ರಾಜನಾಗಿ ತನ್ನ ಪ್ರಜೆಗಳ ಹಿತವನ್ನು ಕಾಪಾಡುತ್ತಾನೆ. ಅವನ ರಾಜ್ಯದಲ್ಲಿ ಎಲ್ಲರೂ ಸುಖ-ಸಮೃದ್ಧಿಯಿಂದ ಆರಾಮವಾಗಿ ಜೀವನ ನಡೆಸುತ್ತಾರೆ. ತನ್ನ ರಾಜ್ಯದ ಕೊಟ್ಟ ಕೊನೆಯ ಪ್ರಜೆಗೂ ತನ್ನ ರಾಜ್ಯಭಾರದ ಮೇಲೆ, ತನ್ನ ಮೇಲೆ ಎಳ್ಳಷ್ಟೂ ಅಸಮಾಧಾನ ಉಂಟಾಗದಂತೆ ರಾಜ್ಯವನ್ನು ನಡೆಸಿಕೊಂಡು ಹೋದ ರಾಮನ ವೈಖರಿಯೇ ರಾಮರಾಜ್ಯವೆಂದು ಪ್ರಸಿದ್ಧವಾಯಿತು. “ರಾಮರಾಜ್ಯದ ಕನಸು” ಎನ್ನುವುದು ಒಂದು ನುಡಿಗಟ್ಟಾಗಿ ಹೋಯಿತು. ಆದರೆ ಅದು “ಕನಸು” ಎನ್ನುವುದನ್ನು ನಾವು ನೆನಪಿಡಲೇಬೇಕು. ರಾಮನು ಮಾತ್ರ ಅಂಥ ರಾಜ್ಯವನ್ನು ನಡೆಸಿದ. ಸರ್ವಶ್ರೇಷ್ಠರಾದ ಅನೇಕರು ಅಂಥದೊಂದು ಹಿರಿದಾದ ಕನಸನ್ನು ಸದಾ ಕಣ್ಮುಂದಿಟ್ಟುಕೊಂಡೇ ನಡೆದಿರಬಹುದು. ಆದರೆ ಅವನ ನಂತರ ಯಾರಿಗೂ ತಮ್ಮ ರಾಜ್ಯವನ್ನು ಆ ರೀತಿ ಸುಭಿಕ್ಷವಾಗಿ, ಸಮೃದ್ಧವಾಗಿ, ಸಮಾಧಾನವಾಗಿ ನಡೆಸುವುದಕ್ಕಾಗಿಯೇ ಇಲ್ಲ. ಅಂಥದೊಂದು ಕನಸಿನ ರಾಜ್ಯವನ್ನು ಕಟ್ಟಿ ನಡೆಸಿಕೊಂಡು ಹೋಗಲು ರಾಮನು ಅನೇಕ ತ್ಯಾಗಗಳನ್ನು ಮಾಡಬೇಕಾಯ್ತು. ಪ್ರಜೆಗಳೇ ಅವನ ಮೊದಲ ಆದ್ಯತೆಯಾಗಬೇಕಾಯ್ತು. ಅವರಿಗಾಗಿ ತನ್ನೆಲ್ಲ ಸುಖಗಳನ್ನು ಗೌಣವಾಗಿಸಿಕೊಳ್ಳಬೇಕಾಯ್ತು. ರಾಜನ ಪರಿವಾರವು ಬಹು ದೊಡ್ಡದಾಗಿರುತ್ತದೆ. ಅದು ಅವನ ಸ್ವಜನರಿಗಷ್ಟೇ ಸೀಮಿತವಾಗಿರುವುದಿಲ್ಲ. ಹಾಗೆ ನೋಡಿದರೆ ಈ ಸ್ವಜನರು ಕೂಡ ರಾಜನ ಗುರಿ ಸಾಧನೆಯ ಅಸ್ತ್ರಗಳಾಗಿ ಬಳಕೆಯಾಗಲು ಖುಷಿ-ಖುಷಿಯಾಗಿ ಹದಗೊಂಡು ತಯಾರಿರಬೇಕಾಗುತ್ತದೆ. ಅಂಥ ಎಲ್ಲ ಪ್ರಯೋಗಗಳು, ಪರಿತಾಪಗಳು ರಾಮನ ಪರಿವಾರದ ಮೇಲೆ ಪದೆ ಪದೆ ಬಂದೆರಗಿದಾಗ, ಪರಿವಾರದವರೆಲ್ಲರೂ ಒಂದು ಮಹೋನ್ನತ ಕಾರ್ಯಕ್ಕಾಗಿ ಒಂದಿಷ್ಟು ತ್ಯಾಗಗಳ ಯೋಗದಾನವನ್ನು ಅರ್ಪಿಸಿದ್ದರಿಂದಲೇ ಅತಿ ಶ್ರೇಷ್ಠವಾದ ರಾಮರಾಜ್ಯದ ಕಲ್ಪನೆಯು ಸಾಕಾರವಾಯ್ತು. ಮತ್ತು ಯುಗಯುಗಾಂತರದಲ್ಲಿಯೂ ಅದೊಂದು ಆದರ್ಶವಾಗಿ, ಒಂದು ಪರಿಕಲ್ಪನೆಯಾಗಿ, ಶ್ರೇಷ್ಠತೆಯ ಮೈಲಿಗಲ್ಲಾಗಿ ಸ್ಥಾಪಿತವಾಯಿತು. ರಾಮನು ಮರ್ಯಾದಾ ಪುರುಷೋತ್ತಮನಾದ.
(ಉತ್ತರ ರಾಮಾಣವು, ವಾಲ್ಮೀಕಿ ರಾಮಾಯಣದ ಮೂಲ ಕೃತಿಯಲ್ಲಿ ಇರುವ ಬಗ್ಗೆ ಅನೇಕ ವಿದ್ವಾಂಸರು, ಮತ್ತು ಸಂಸ್ಕೃತ ಪಂಡಿತರು ಆಧಾರಸಹಿತವಾಗಿ ಸಂಶಯಗಳನ್ನು ವ್ಯಕ್ತ ಪಡಿಸಿದ್ದಾರೆ. ವಾಲ್ಮೀಕಿಯ ಮೂಲ ರಾಮಾಯಣವು ಯುದ್ಧಕಾಂಡದೊಂದಿಗೆ ಸಮಾಪ್ತವಾಗುತ್ತದೆ ಎನ್ನುವ ಅಭಿಪ್ರಾಯವೂ ಸಾರ್ವತ್ರಿಕವಾಗಿರುವುದರಿಂದ, ಮತ್ತು ಸಾಕಷ್ಟು ವಿಚಾರ ಮಾಡಿದ ನಂತರ ಅದು ನನಗೂ ಮನವರಿಕೆಯಾಗಿದ್ದರಿಂದ ಅದರ ವಿಚಾರ-ವಿಮರ್ಶೆಯನ್ನು ನಾನು ಕೈಬಿಟ್ಟಿದ್ದೇನೆ. ನನ್ನ ಮತ್ತು ಇತರರ ತಿಳುವಳಿಕೆಯನ್ನು ವಿಸ್ತರಿಸುವ ಅಭಿಲಾಷೆಯಿರುವ ಸಹೃದಯರು ಇದಕ್ಕೆ ತಕ್ಕ ವಿವರಣೆ ಒದಗಿಸಬಹುದು ಎಂದು ವಿನಮ್ರವಾಗಿ ತಿಳಿಸುತ್ತ, ಶ್ರೀ ರಾಮಾಯಣದ ಬಗೆಗಿನ ನನ್ನ ಲೇಖನಮಾಲೆಯನ್ನು ಮುಗಿಸುತ್ತಿದ್ದೇನೆ. )
ಸಂಪೂರ್ಣ ಸರಣಿ ಓದುಗರಿಗಾಗಿ –
ಭಾಗ 2 –
ಭಾಗ 3 –
ಭಾಗ 4-
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ