ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರಿಗೆ 45 ರಿಂದ 48 ಸಾವಿರದವರೆಗೆ ಮಾಸಿಕ ವೇತನವನ್ನು ಮುಂದಿನ 6 ತಿಂಗಳವರೆಗೆ ಸರ್ಕಾರವೇ ಭರಿಸಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ದೇಶದಲ್ಲಿ ಕೊರೋನ ಇನ್ನೂ ಸಮುದಾಯ ಹಂತಕ್ಕೆ ತಲುಪಿಲ್ಲ. ಕಳೆದ 15 ದಿನಗಳಿಂದ ಮಾತ್ರವೇ ರಾಜ್ಯದಲ್ಲಿ ಸೋಂಕು ಹರಡುವಿಕೆ ಹೆಚ್ಚಾಗಿದೆ. ಇತರೆ ರಾಜ್ಯಗಳಲ್ಲಿ 2 ತಿಂಗಳು ಮುಂಚಿತವಾಗಿಯೇ ಈ ಮಟ್ಟದಲ್ಲಿ ಹರಡಿತ್ತು.
ಬೆಂಗಳೂರಿನ ವಲಯವಾರು ಕೋವಿಡ್ ಉಸ್ತುವಾರಿ ಸಚಿವರುಗಳ ಜೊತೆ ಸಿಎಂ ಮಹತ್ವದ ಸಭೆ ನಡೆಸಿದ್ದಾರೆ. ಬೂತ್ ಮಟ್ಟದ ಕಾರ್ಯಪಡೆಗಳು ಸೋಂಕಿತರ, ಸಂಪರ್ಕಿತರ ಮತ್ತು ILI ಮತ್ತು SARI ಲಕ್ಷಣವುಳ್ಳ ವ್ಯಕ್ತಿಗಳನ್ನು ತ್ವರಿತವಾಗಿ ಪತ್ತೆ ಹಚ್ಚಿ ಪರೀಕ್ಷೆ ಮಾಡಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ಅವರು ಹೇಳಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಡ್ಯಾಶ್ ಬೋರ್ಡ್ ನಲ್ಲಿ ಈಗ ಲಭ್ಯವಿದೆ. ರಿಯಲ್ ಟೈಮ್ ಮಾಹಿತಿಯಿಂದ ಹಾಸಿಗೆ ಲಭ್ಯತೆ ಕಂಡುಹಿಡಿಯುವುದು ಈಗ ಸರಳವಾಗಿದೆ. ರಾಜ್ಯದಲ್ಲಿ ಇದುವರೆಗೆ 10,57,303 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಮರಣ ಪ್ರಮಾಣ 2.08% ರಷ್ಟಿದೆ ಎಂದರು.
ವಿಕ್ಟೋರಿಯ ಆಸ್ಪತ್ರೆಯಲ್ಲಿ ಮೇ ಯಿಂದ ಇದುವರೆಗೆ 118 ಕೋವಿಡ್ ಸೋಂಕಿತ ಗರ್ಭಿಣಿಯರ ಹೆರಿಗೆ ಮಾಡಲಾಗಿದ್ದು ಎಲ್ಲ ತಾಯಂದಿರು ಹಾಗೂ ನವಜಾತ ಶಿಶುಗಳು ಆರೋಗ್ಯದಿಂದಿದ್ದಾರೆ. ಯಾವ ಮಗುವಿಗೂ ಸೋಂಕು ತಗುಲಿಲ್ಲ. ಖಾಸಗಿ ಆಸ್ಪತ್ರೆಯ ವೈದ್ಯರೂ ಕೂಡ ಧೃತಿಗೆಡದೆ ಕೋವಿಡ್ ಸೋಂಕಿತರ ಹೆರಿಗೆಗೆ ಮುಂದಾಗಬೇಕು. ಗರ್ಭಿಣಿಯರಿಗೆ ಈ ಸಂದರ್ಭದಲ್ಲಿ ನೆರವಾಗಬೇಕು ಎಂದು ಸಚಿವ ಡಾ.ಸುಧಾಕರ್ ಕರೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ