ಗಿರೀಶ್ ಬಿ.
ಪದೇ ಪದೇ ಗಡಿ ತಂಟೆಯ ಮೂಲಕ ಭಾರತಕ್ಕೆ ಮಗ್ಗಲು ಮುಳ್ಳಾಗಿರುವ ಚೀನಾಕ್ಕೆ ಪಾಠ ಕಲಿಸಲು ಭಾರತಕ್ಕೆ ರಫೇಲ್ ಬ್ರಹ್ಮಾಸ್ತ್ರ ದೊರೆತಂತಾಗಿದೆ. ಏಕೆಂದರೆ ಭಾರತದ ವಾಯುಪಡೆಯ ಬತ್ತಳಿಕೆಗೆ ರಫೇಲ್ ಎಂಬ ಅತ್ಯಾಧುನಿಕ ಯುದ್ಧ ವಿಮಾನಗಳು ಸೇರ್ಪಡೆಯಾಗಲಿವೆ. ಒಂದೆಡೆ ಭಾರತ-ಚೀನಾ ನಡುವೆ ಗಡಿಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ಮುಂದುವರಿದಿರುವಂತೆಯೇ ಭಾರತಕ್ಕೆ ಫ್ರಾನ್ಸ್‌ನಿಂದ ರಫೇಲ್ ಯುದ್ಧ ವಿಮಾನಗಳು ಬಂದಿಳಿಯುತ್ತಿರುವುದರಿಂದ ಖಂಡಿತವಾಗಿಯೂ ನಮ್ಮ ಸೈನಿಕರ ಮನೋಬಲ ಮತ್ತಷ್ಟು ಹೆಚ್ಚಲಿದೆ. ರಫೇಲ್ ಖರೀದಿಯಿಂದ ಪಾಕ್‌ಗೂ ಎಚ್ಚರಿಕೆ ರವಾನಿಸಿದಂತಾಗಿದೆ. ಪಾಕಿಸ್ಥಾನದಲ್ಲಿನ ಎಫ್-೧೬, ಚೀನಾದ ಜೆ-೨೦ ವಿಮಾನಗಳನ್ನೂ ಮೀರಿಸಬಲ್ಲ ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಪಡೆಯ ಶಕ್ತಿಯನ್ನು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದೇ ಭಾವಿಸಬಹುದು.
ಲಡಾಖ್‌ನ ವಾಸ್ತವಿಕ ಗಡಿ ರೇಖೆ ಬಳಿಯ ಗಾಲ್ವಾನ್ ಕಣ ವೆ, ಹಾಟ್ ಸ್ಪ್ರಿಂಗ್ಸ್, ಗೋಗ್ರಾ, ಡೆಪ್ಸಾಂಗ್ ಪ್ಲೇನ್ಸ್ ಹಾಗೂ ಮುಖ್ಯವಾಗಿ ಪ್ಯಾಂಗಾಂಗ್ಸ್ ತ್ಸೋ ಸರೋವರದ ಬಳಿ ಚೀನಾವು ತನ್ನ ಹೆಚ್ಚಿನ ಸೇನೆಯನ್ನು, ಯುದ್ದೋಪಕರಣಗಳನ್ನು ನಿಯೋಜಿಸುವ ಮೂಲಕ ಭೀತಿ ಸೃಷ್ಟಿಸಿದೆ. ಪ್ಯಾಂಗಾಂಗ್ ತ್ಸೋ ಸರೋವರದ ಬಳಿ ಬಿಕ್ಕಟ್ಟು ಇನ್ನೂ ಶಮನಗೊಂಡಿಲ್ಲ.
ಭಾರತ ಮತ್ತು ಚೀನಾ ನಡುವೆ ಗಡಿ ಸಂಘರ್ಷದ ಬಳಿಕ ಕೇಂದ್ರ ಸರ್ಕಾರ ಫ್ರಾನ್ಸ್ ನಿರ್ಮಾಣ ಕಂಪನಿಗೆ ತ್ವರಿತವಾಗಿ ರಫೆಲ್ ವಿಮಾನಗಳನ್ನು ಒದಗಿಸುವಂತೆ ಮನವಿ ಮಾಡಿತ್ತು. ಅದರಂತೆ ಇದೀಗ ಮೊದಲ ಹಂತದಲ್ಲಿ ಐದು ವಿಮಾನಗಳನ್ನು ಮಾತ್ರ ಒದಗಿಸಲಾಗುತ್ತಿದೆ. ಇದರಿಂದ ಸುಧಾರಿತ ರಫೆಲ್ ಯುದ್ಧ ವಿಮಾನಗಳು ಭಾರತೀಯ ಸೇನೆಗೆ ಹೆಚ್ಚಿನ ಬಲ ತುಂಬಲಿದೆ. ಹೀಗಾಗಿ ಭಾರತದ ಸೇನೆ ಎಲ್ಲ ವಿಧದ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ. ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಗಳೂ ಕೂಡ ಲಡಾಖ್‌ನ ಚೀನಾ ಗಡಿಯಲ್ಲಿರುವ ಮುಂಚೂಣಿ ನೆಲೆಗಳಲ್ಲಿ ಹೆಚ್ಚುವರಿ ಸೇನೆಯನ್ನು ಹಾಗೂ ಯುದ್ಧ ವಿಮಾನ, ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ. ಚೀನಾವು ಜೆ-೧೧ ಮತ್ತು ಜೆ-೮ ಯುದ್ಧ ವಿಮಾನಗಳನ್ನು ಸೇನಾ ನೆಲೆಗಳಲ್ಲಿ ನಿಯೋಜಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆ ಸುಖೋಯ್-೩೦ ಎಂಕೆಐ, ಮಿರಾಜ್ ೨೦೦೦ ಮತ್ತು ಜಾಗ್ವಾರ್ ಯುದ್ಧ ವಿಮಾನಗಳನ್ನು ಹಾಗೂ ಇತ್ತೀಚೆಗೆ ವಾಯುಪಡೆಗೆ ಸೇರ್ಪಡೆಯಾಗಿರುವ ಅಪಾಚೆ ಮತ್ತು ಚಿನೋಕ್ ಹೆಲಿಕಾಪ್ಟರ್‌ಗಳನ್ನೂ ನಿಯೋಜಿಸಿದೆ. ಇನ್ನು ಮುಂದೆ ಅವುಗಳ ಸಾಲಿಗೆ ರಫೇಲ್ ಯುದ್ಧ ವಿಮಾನಗಳೂ ಸೇರಲಿವೆ.
೧೩ ವರ್ಷಗಳ ಹಿಂದೆಯೇ ಟೆಂಡರ್ :
ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಸಂಸ್ಥೆ ಅಭಿವೃದ್ಧಿಪಡಿಸಿರುವ ರಫೇಲ್ ಪ್ರಸಕ್ತ ಜಾಗತಿಕ ರಕ್ಷಣಾ ವ್ಯವಸ್ಥೆಯಲ್ಲಿರುವ ಅತ್ಯುತ್ತಮ ಯುದ್ಧ ವಿಮಾನಗಳಲ್ಲಿ ಒಂದು. ೧೩ ವರ್ಷಗಳ ಹಿಂದೆ ಭಾರತೀಯ ವಾಯುಪಡೆಯು ಮಧ್ಯಮ ಶ್ರೇಣಿಯ ಯುದ್ಧವಿಮಾನಗಳ ಖರೀದಿಗೆ ಟೆಂಡರ್ ಕರೆದಿತ್ತು. ಆಗ ಲಾಕ್‌ಹೀಡ್ ಮಾರ್ಟಿನ್, ಡಸಾಲ್ಟ್ ಮುಂತಾದ ಹಲವು ಜಾಗತಿಕ ಯುದ್ಧ ವಿಮಾನ ತಯಾರಕ ಕಂಪೆನಿಗಳು ಮುಂದೆ ಬಂದಿದ್ದವು. ಕೊನೆಗೆ ೨೦೧೨ರಲ್ಲಿ ಭಾರತ ರಫೇಲ್ ಖರೀದಿಗೆ ತಯಾರಾಗಿತ್ತು. ಆದರೆ, ದರದ ವಿಚಾರದಲ್ಲಿ ಗೊಂದಲ ಏರ್ಪಟ್ಟಿದ್ದರಿಂದ ಖರೀದಿ ಪ್ರಕ್ರಿಯೆ ನಿಂತಿತ್ತು. ೨೦೧೬ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಹೊಸ ಒಪ್ಪಂದವನ್ನು ಮಾಡಿಕೊಂಡಿತ್ತು.
ರಫೇಲ್‌ನ ವಿಶೇಷತೆಗಳು:
೧) ನೆಲದ ಮೇಲಿರುವ ಶತ್ರು ಸೈನಿಕರು, ಕ್ಯಾಂಪ್, ಬಂಕರ್, ಟ್ಯಾಂಕರ್, ಯುದ್ಧ ನೌಕೆಗಳನ್ನು ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯ
೨) ರಫೇಲ್ ಆಕಾಶದಲ್ಲೇ ಶತ್ರು ಸೇನೆಯ ಯುದ್ಧ ವಿಮಾನಗಳನ್ನು ನಾಶಗೊಳಿಸಬಲ್ಲದು.
೩) ಎದುರಾಳಿ ಸೇನೆಯ ದೃಷ್ಟಿಗೆ ನಿಲುಕದಷ್ಟು ಆಕಾಶದೆತ್ತರಕ್ಕೇರಿ ಶತ್ರು ನೆಲೆಗಳ ಮೇಲೆ ದಾಳಿ ನಡೆಸಬಲ್ಲದು.
೪) ಅಣ್ವಸ್ತ್ರ ಸಿಡಿತಲೆ ಇರುವ ಕ್ಷಿಪಣ ಗಳನ್ನೂ ಹಾರಿಸಬಲ್ಲದು.
೫) ನಿಖರ ದಾಳಿಗೆ ಹೆಸರಾದ ಹ್ಯಾಮರ್ ಕ್ಷಿಪಣ ಗಳನ್ನೂ ರಫೇಲ್ ಹೊಂದಿರಲಿವೆ. ಹ್ಯಾಮರ್ ಕ್ಷಿಪಣ ಗಳು ಶತ್ರು ಪಾಳಯದ ಬಂಕರ್ ಅಥವಾ ಕಣ ವೆ ಪ್ರದೇಶದಲ್ಲಿನ ಅಡಗುದಾಣಗಳನ್ನು ಒಮ್ಮೆಗೇ ಛಿದ್ರಗೊಳಿಸುತ್ತವೆ.
೬) ರಫೇಲ್‌ನ ಬಹುದಿಕ್ಕಿನ ರೇಡಾರ್ ವ್ಯವಸ್ಥೆಯು ೧೦೦ ಕಿಲೋಮೀಟರ್ ವ್ಯಾಪ್ತಿಯಲ್ಲಿನ ಸುಮಾರು ೪೦ ಟಾರ್ಗೆಟ್‌ಗಳನ್ನು ಏಕಕಾಲದಲ್ಲಿ ಪತ್ತೆಹಚ್ಚಬಲ್ಲದು.
೭) ರಫೇಲ್ ಬೃಹತ್ ಡಿಜಿಟಲ್ ಕ್ಯಾಮೆರಾವನ್ನು ಹೊಂದಿದ್ದು, ಯಾವುದೇ ವೇಗದಲ್ಲೂ ಸಹ ಸ್ಪಷ್ಟ ಚಿತ್ರಗಳನ್ನು ತೆಗೆಯಬಲ್ಲದು. ಇದರ ಅತ್ಯಾಧುನಿಕ ತಂತ್ರಜ್ಞಾನವು, ಶತ್ರುಪಡೆಯ ರೇಡಾರ್ ಸಿಗ್ನಲ್‌ಗಳನ್ನು ಜಾಮ್ ಮಾಡಿ, ದಾರಿ ತಪ್ಪಿಸಬಲ್ಲದು.
೮) ಶತ್ರುಪಡೆಯ ಕ್ಷಿಪಣ ಯೊಂದು ತನ್ನತ್ತ ಬರುತ್ತಿದೆ ಎನ್ನುವುದನ್ನು ರಫೇಲ್ ದೂರದಿಂದಲೇ ಪತ್ತೆ ಹಚ್ಚುತ್ತದೆ ಮತ್ತು ಈ ವಿಷಯವನ್ನು ಕ್ಷಣಾರ್ಧದಲ್ಲಿ ಬೇಸ್‌ಗೆ ಸಂದೇಶ ಕಳುಹಿಸುತ್ತದೆ.
೯) ಶತ್ರುಪಡೆಯ ಕ್ಷಿಪಣ ಯು ತನಗೆ ತೀರಾ ಹತ್ತಿರವಾದಲ್ಲಿ, ಎಲೆಕ್ಟ್ರ್ರೋಮ್ಯಾಗ್ನಟಿಕ್ ಪಲ್ಸ್‌ಗಳಲ್ಲಿ ಏರುಪೇರು ಮಾಡಿ, ಎದುರಿಗಿನ ಕ್ಷಿಪಣ ಯ ಹಾದಿ ತಪ್ಪಿಸಬಲ್ಲದು.
ರಫೇಲ್ ಯುದ್ಧ ವಿಮಾನವು ಪಾಕಿಸ್ಥಾನದಲ್ಲಿರುವ ಎಫ್-೧೬ ಯುದ್ಧ ವಿಮಾನಕ್ಕೆ ಪ್ರತಿಸ್ಪರ್ಧಿ ಎನಿಸಲಿದೆ. ಏಕೆಂದರೆ ಎರಡು ಇಂಜಿನ್ ಇರುವ ರಫೇಲ್ ಹಲವು ಅಂಶಗಳಲ್ಲಿ ಎಫ್-೧೬ ಗಿಂತಲೂ ಮುಂದಿದೆ. ಆದರೆ, ಯಶಸ್ಸಿನಲ್ಲಿ ಯುದ್ಧ ಪೈಲಟ್‌ಗಳ ನೈಪುಣ್ಯವೇ ಪ್ರಮುಖವಾದುದು. ರಫೇಲ್‌ನ ಪ್ರಮುಖ ಶಕ್ತಿ ಎಂದರೆ ಏಕಕಾಲದಲ್ಲಿ ಹಲವು ಗುರಿಗಳನ್ನು ನಾಶಪಡಿಸುವ ಸಾಮರ್ಥ್ಯ ಅದಕ್ಕಿದೆ. ಹಾಗೆಯೇ ಒಂದು ರಫೇಲ್ ಯುದ್ಧವಿಮಾನವನ್ನು ಎದುರಿಸಲು ಎದುರಾಳಿ ದೇಶವು ಎರಡು ಯುದ್ಧ ವಿಮಾನಗಳನ್ನು ನಿಲ್ಲಿಸಬೇಕಾಗುತ್ತದೆ. ರಫೇಲ್ ನೆಲದಿಂದ ಹಾಗೂ ವಾಯು ಮಾರ್ಗದಿಂದ ಎದುರಾಗುವ ಯಾವುದೇ ಅಪಾಯಗಳನ್ನು ಕ್ಷಣಾರ್ಧದಲ್ಲಿ ಪತ್ತೆಮಾಡುತ್ತದೆ. ಆದರೆ ರಫೇಲ್‌ಗೆ ಸರಿಸಾಟಿಯಾಗಿ ಚೀನಾದ ಜೆ-೨೦ ನಿಲ್ಲುತ್ತದೆ. ಏಕೆಂದರೆ ಜೆ-೨೦ಯಲ್ಲಿನ ರಕ್ಷಣಾ ವ್ಯವಸ್ಥೆಯೂ ಬಲಿಷ್ಠವಾಗಿದ್ದು, ಯುದ್ಧರಂಗದಲ್ಲಿ ಪೈಲಟ್‌ಗೆ ೩೬೦ ಡಿಗ್ರಿ ಮಾಹಿತಿ ಸಿಗುತ್ತದೆ ಎಂದು ಚೀನಾ ಸೇನೆ ಹೇಳಿಕೊಂಡಿದೆ.
ಚೀನಾ ತನ್ನ ಜೆ-೨೦ ಯುದ್ಧವಿಮಾನವಿಟ್ಟುಕೊಂಡು ಸೊಕ್ಕಿನಿಂದ ಮೆರೆಯುತ್ತಿದೆ. ಶತ್ರುಪಡೆಯ ರೇಡಾರ್‌ಗಳಿಗೆ ಜೆ-೨೦ ವಿಮಾನವನ್ನು ಪತ್ತೆ ಹಚ್ಚುವುದಕ್ಕೆ ಸಾಧ್ಯವಿಲ್ಲ ಎಂದು ಚೀನಾ ಹೇಳುತ್ತಿದೆ. ಆದರೆ, ಭಾರತದ ನಿವೃತ್ತ ಸೇನಾಧಿಕಾರಿಗಳು ಹೇಳುವ ಪ್ರಕಾರ ಚೀನಾದ ಜೆ-೨೦ ಶ್ರೇಷ್ಠವೇನಲ್ಲ, ಏಕೆಂದರೆ, ಈಗಾಗಲೇ ಭಾರತೀಯ ರೇಡಾರ್‌ಗಳು ಜೆ-೨೦ಯನ್ನು ಪತ್ತೆ ಹಚ್ಚಿದ ಉದಾಹರಣೆಯಿದೆ’. ಮೊದಲು ಚೀನಾವೇ ಅದರ ಎಂಜಿನ್ ಅಭಿವೃದ್ಧಿ ಮಾಡಲು ಮುಂದಾಯಿತಂತೆ. ಆದರೆ, ಅದಕ್ಕೆ ಸಾಧ್ಯವಾಗದೆ, ಕೊನೆಗೆ ರಷ್ಯಾದಿಂದ ಇಂಜಿನ್ ಖರೀದಿಸಿತಂತೆ. ಇವೆಲ್ಲ ಏನೇ ಇರಲಿ. ಜೆ-೨೦ಯ ಸಾಮರ್ಥ್ಯವನ್ನು ನಾವು ಕಣ್ಣಾರೇ ಕಂಡಿಲ್ಲ. ಏಕೆಂದರೆ, ಜೆ-೨೦ ಇಲ್ಲಿಯವರೆಗೂ ಯಾವುದೇ ಯುದ್ಧದಲ್ಲಿ ಭಾಗವಹಿಸಿಲ್ಲ. ಇನ್ನೊಂದೆಡೆ ರಫೇಲ್ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಲಿಬ್ಯಾ, ಅಫ್ಘಾನಿಸ್ಥಾನ, ಮಾಲಿ, ಇರಾಕ್ ಮತ್ತು ಸಿರಿಯಾದಲ್ಲಿ ಕಾರ್ಯಾಚರಣೆ ಮಾಡಿದ್ದು, ಅಲ್ಲಿನ ಅನುಭವಗಳನ್ನು ಆಧರಿಸಿ ರೆಫೆಲ್‌ನ ಪರಿಷ್ಕರಣೆ ಮಾಡಲಾಗಿದೆ. ಭಾರತದೊಂದಿಗೆ ಮಾತುಕತೆಯ ನಾಟಕವಾಡುತ್ತ ತೆರೆಮರೆಯಲ್ಲಿ ಯುದ್ಧದ ಯೋಜನೆ ರೂಪಿಸುತ್ತಿರುವ ಕುತಂತ್ರಿ ಚೀನಾಕ್ಕೆ ಭಾರತದ ರಫೇಲ್ ಖರೀದಿಯಿಂದ ಹಿನ್ನಡೆಯಾಗಿದ್ದಂತೂ ಸುಳ್ಳಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ