Latest

ಬಿಜೆಪಿ ಪರ ಪ್ರಚಾರ ಮಾಡಿದ್ದ ನಟಿ ರಾಗಿಣಿ ಬಿಜೆಪಿ ಸದಸ್ಯರಲ್ಲ: ಪಕ್ಷದ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಿಂದ ಬಂಧನಕ್ಕೀಡಾಗಿರುವ ನಟಿ ರಾಗಿಣಿ ಬಿಜೆಪಿ ಸದಸ್ಯೆಯಲ್ಲ, ಪಕ್ಷಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ತಿಳಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಬಿಜೆಪಿ, 2019ರ ಉಪ ಚುನಾವಣೆಯಲ್ಲಿ ಸಮಾಜದ ವಿವಿಧ ಸ್ತರದ ನೂರಾರು ಗಣ್ಯರು ಸ್ವಯಂ ಪ್ರೇರಿತವಾಗಿ ಬಿಜೆಪಿ ಪರ ಪ್ರಚಾರ ನಡೆಸಿದ್ದಾರೆ. ಅವರಲ್ಲಿ ನಟಿ ರಾಗಿಣಿ ಕೂಡ ಒಬ್ಬರಾಗಿರಬಹುದು. ಆದರೆ ರಾಗಿಣಿ ದ್ವಿವೇದಿ ಅವರು ಬಿಜೆಪಿಯ ಸದಸ್ಯರಲ್ಲ. ಬಿಜೆಪಿ ಅವರಿಗೆ ಯಾವುದೇ ಚುನಾವಣೆಯ ಯಾವುದೇ ಕಾರ್ಯಭಾರ ವಹಿಸಿರಲಿಲ್ಲ. ಅವರು ಸ್ವತಃ ತಾವೇ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ರಾಗಿಣಿ ದ್ವಿವೇದಿ ಅವರ ವೈಯಕ್ತಿಕ ಅಥವಾ ವೃತ್ತಿ ಜೀವನದ ಕಾರ್ಯ ಚಟುವಟಿಕೆಗಳಿಗೆ ಬಿಜೆಪಿ ಹೊಣೆಯಾಗುವುದಿಲ್ಲ ಅಥವಾ ಅದಕ್ಕೆ ಉತ್ತರ ನೀಡುವ ಅಗತ್ಯವೂ ಇರುವುದಿಲ್ಲ. ನಾವು ಅದರಿಂದ ಅಂತರ ಕಾಯ್ದುಕೊಳ್ಳುತ್ತೇವೆ.

ಬಿಜೆಪಿ ಯಾವುದೇ ವ್ಯಕ್ತಿಯ, ಯಾವುದೇ ಸ್ವರೂಪದ, ಯಾವುದೇ ರೂಪದ ಸಮಾಜಘಾತಕ ಚಟುವಟಿಕೆಗಳಿಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತದೆ. ನಾವು ಎಂದಿಗೂ ಅಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ಅಥವಾ ಬೆಂಬಲ ನೀಡುವದಿಲ್ಲ. ಹೀಗಾಗಿ ರಾಗಿಣಿ ದ್ವಿವೇದಿ ಅವರು ಮಾದಕ ದ್ರವ್ಯ ಜಾಲದಲ್ಲಿ ತೊಡಗಿಕೊಂಡಿದ್ದಾರೆಂಬುದಕ್ಕೂ ನಮಗೂ ಸಂಬಂಧವಿಲ್ಲ ಎಂದು ಬಿಜೆಪಿ ತಿಳಿಸಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button